ಜೈ ಜನೇಂದ್ರ ವೀಕ್ಷಕರೆ,
ವರೂರು ನವಗ್ರಹತೀರ್ಥ ಕ್ಷೇತ್ರದಲ್ಲಿ ಜನವರಿ15 ರಿಂದ 26 ರವರೆಗೆ 61 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವ ಜರುಗಲಿದೆ. ನಗರದಲ್ಲಿ ಶುಕ್ರವಾರ ನಡೆದ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಪರಮಪೂಜ್ಯ 108 ಗುಣಧರ್ಮ ನಂದಿ ಮುನಿಮಹಾರಾಜರು 12 ವರ್ಷಗಳ ನಂತರ ನಡೆಯುತ್ತಿರುವ 2ನೇ ಮಸ್ತಕಾಭಿಷೇಕ ಇದಾಗಿದ್ದುಜನವರಿ 1ರಿಂದ ನವಗ್ರಹ ಕ್ಷೇತ್ರಕ್ಕೆ ಜೈನ ಸಮಾಜದ ಮುನಿಗಳು ತಮಿಳುನಾಡು, ರಾಜಸ್ಥಾನ , ಗುಜರಾತ್ , ಮಹಾರಾಷ್ಟ್ರ ಇನ್ನಿತರ ರಾಜ್ಯಗಳಿಂದ ಆಗಮಿಸಲಿದ್ದಾರೆ. ಅಮೇರಿಕಾ, ಫ್ರಾನ್ಸ್, ಜರ್ಮನಿ ಹಾಗೂ ವಿವಿಧ ದೇಶಗಳಿಂದ ಕ್ಷೇತ್ರಕ್ಕೆ ಭಕ್ತಾಧಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು. ಅಲ್ಲದೇ ಜನವರಿ 15 ರಿಂದ 20 ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಜನವರಿ 15, 16 ರಂದು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಗರ್ಭ ಕಲ್ಯಾಣ , 17 ರಂದು ಭಗವಾನ್ ಪಾರ್ಶ್ವನಾಥರ ರಾಜ್ಯಾಭಿಷೇಕ 19 ರಂದು ಕೇವಲ ಜ್ನಾನ, 20 ರಂದು ಮೋಕ್ಷ ಕಲ್ಯಾಣ ಹೀಗೆ ಪಂಚಕಲ್ಯಾಣ ಮಹೋತ್ಸವಗಳು ನಡೆಯಲಿವೆ. 21 ರಂದು ನವಗ್ರಹ ಕ್ಷೇತ್ರದಲ್ಲಿನ 9 ತೀರ್ಥಂಕರರ ಮೂರ್ತಿಗಳಿಗೆ ಜನಸಾಮಾನ್ಯರಿಂದ ಜಲಾಭಿಷೇಕ ನಡೆಯಲಿದೆ. 22 ರಂದು ಮೂರ್ತಿಗಳ ದಾನಿಗಳಿಂದ ಅಭಿಷೇಕ 25 ರಂದು ಇಂದ್ರ ಮತ್ತು ಇಂದ್ರಾಣಿಯರಿಂದ ಮಸ್ತಕಾಭಿಷೇಕ ಜರುಗಲಿದೆ ಎಂದರು. ಜನವರಿ 15 ರಂದು ರಾಜ್ಯಪಾಲರವರು , 16 ರಂದು ಉಪರಾಷ್ಟ್ರಪತಿ ಹಾಗೂ 21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಮಹಾ ಮಸ್ತಕಾಭಿಷೇಕಕ್ಕೆ ಆಗಮಿಸಲಿದ್ದಾರೆ. ಜನವರಿ 20 ರಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಸದಾನಂದ ಗೌಡ ರವರು ಜನವರಿ 22 ರಂದು ಆರ್ ಎಸ್ ಎಸ್ ಪ್ರಮುಖ ಮಂಗೇಶ್ ಬೇಂಡೆ, ಜನವರಿ 23 ರಂದು ಲೋಕಸಭೆ ಸ್ಫೀಕರ್ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವರು ರಾಜ್ಯ ಸಚಿವರು ಪಂಜಾಬ್, ಕೇರಳ, ರಾಜಾಸ್ಥಾನ, ಮೇಘಾಲಯ ರಾಜ್ಯಗಳ ರಾಜ್ಯಪಾಲರು ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ. ಜನವರಿ 22,23 ಹಾಗೂ 24 ರಂದು ನವಗ್ರಹ ತೀರ್ಥ ಕ್ಷೇತ್ರದಲ್ಲಿರುವ ತೀರ್ಥಂಕರರ ಮೂರ್ತಿಗಳ ಮೇಲೆ ಹೆಲಿಕಾಪ್ಟರ್ ನಿಂದ ನವಗ್ರಹ ಪುಷ್ಪವೃಷ್ಠಿ ನೆರವೇರಲಿದೆ. ಜನವರಿ 23 ರಂದು ಮುಂಜಿವಂದನಾ, ಮಂತ್ರಸಂಸ್ಕಾರ ಹಾಗೂ ರಥ ಸಂಸ್ಕಾರ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ , ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್, ಅನುರಾಧಭಟ್, ಅರ್ಜುನ್ ಜನ್ಯಾ, ಅನುಶ್ರೀ , ರಾಜೇಶ್ ಕೃಷ್ಣ , ಸಾಧುಕೋಕಿಲ, ರವಿಚಂದ್ರನ್ , ರಮೇಶ್ ಅರವಿಂದ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಆಚಾರ್ಯ ಶ್ರೀಗಳು, ಪೇಚಾವರ ಶ್ರೀಗಳು , ಆದಿಚುಂಚನಗಿರಿ ಕ್ಷೇತ್ರ ಮಠಾಧೀಶರುಗಳು ಹಾಗೂ ಇತರ ಮಠಾದೀಶರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನಡೆಯುವ ಕಾರ್ಯಕ್ರಮದ ಬಗ್ಗೆ ವಿಸ್ತಾರವಾಗಿ ಅನೇಕ ಕಾರ್ಯಕ್ರಮಗಳ ಮಾಹಿತಿಯನ್ನು ಹಂಚಿಕೊಂಡರು.













