ಇಂದು ನಮ್ಮ ತಂಡ ಗುರುವಯನಕೆರೆಯನ್ನು ಸವಿಯಲಿದೆ. ಬೆಳ್ತಂಗಡಿ ಬಸದಿಗಳ ಸಮುಚ್ಚಯವು ಇಂದಿನ ಬೆಳ್ತಂಗಡಿ ಯ ಪೇಟೆಯ ತುಸು ದೂರದಲ್ಲಿ ಅಂದರೆ ಗುರುವಯನಕೆರೆಗೆ ಅತಿ ಸಮೀಪದಲ್ಲಿರುವುದರಿಂದ ಇವುಗಳನ್ನು ಗುರುವಯನಕೆರೆ ಬಸದಿಗಳೆಂದೇ ಗುರುತಿಸಲಾಗುತ್ತಿತ್ತು. ಆದರೆ ಸಾಮಾನ್ಯವಾಗಿ ಇವುಗಳನ್ನು ಬೆಳ್ತಂಗಡಿ ಬಸದಿಗಳೆಂದೇ ಕರೆಯುತ್ತಾರೆ. ಏಕೆಂದರೆ ಈ ಮೂರು ಬಸದಿಗಳು ಗುರುವಯನಕೆರೆ ಹೆಸರು ಬಳಕೆಗೆ ಬರುವುದಕ್ಕಿಂತ ಅಂದರೆ ಕ್ರಿ.ಶ 17 ನೇ ಶತಮಾನಕ್ಕಿಂತ ಮೊದಲೇ ನಿರ್ಮಾಣ ನಿರ್ಮಾಣಗೊಂಡಿದ್ದವು. ಪುರಾತನ ಜಿನಮಂದಿರಗಳ ಈ ಬಸದಿಯು ಸಮುಚ್ಚಯವು ಹೊಂಬುಜ ಮಠದ ಜಗದ್ಗುರು ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರವರ ಸೂಕ್ತ ಮಾರ್ಗದರ್ಶನದಲ್ಲಿ ಬಾರಾಡಿಬೀಡು ದಿವಂಗತ ಶ್ರೀ ಪಾಂಡರಾಜ ಬಲ್ಲಾಳರು ಮತ್ತು ಕೆಲ್ಲಗುತ್ತು ಸಬರಬೈಲು ದಿ. ಶ್ರೀಮತಿ ಕಿನ್ನಮ್ಮಯಾನೆ ಗುಣವತಿ ಅಮ್ಮನವರ ಮಕ್ಕಳು , ತಮ್ಮ ಸಹೋದರ ಹಾಗೂ ಬಲ್ಲಾಳ್ ಕುಟುಂಬ ವರ್ಗ ದವರು ಅನುವಂಶಿ ಆಡಳಿತಮುಕ್ತಿ ಶ್ರೀ ಕೆ. ಮಾಣಿಕ್ಯ ರಾಜು ಬಲ್ಲಾಳರ ನಾಯಕತ್ವಕದಲ್ಲಿ ಈ ಪವಿತ್ರ ಜಿನಮಂದಿರಗಳನ್ನು ಪುನರ್ ನವೀಕರಿಸಿದ್ದಾರೆ. ಇಲ್ಲಿಯ ಇಡೀ ಪರಿಸರವೇ ಹೊಸ ಕಾಂತಿ ಚೆಲುವು ಮತ್ತು ಆಧ್ಯಾತ್ಮಿಕ ವೈಭವದಿಂದ ಕಂಗೊಳಿಸುತ್ತಿದೆ.
ಈ ಜಿನಮಂದಿರದ ಸಮುಚ್ಚಯದಲ್ಲಿ ಅತ್ಯಂತ ಆಕರ್ಷಿತವಾಗಿ ಕಾಣುವುದು ಇಲ್ಲಿ ಕಲಾ ವೈಭವದಿಂದ ಮೆರೆಯುತ್ತಿರುವ ಹಾಗೂ ನಿಂತಿರುವ ಮಾನಸ್ಥಂಭ . ಇದರ ತುದಿಯಲ್ಲಿರುವ ಮಂಟಪ ರಚನೆ ಅದರೊಳಗೆ ನಾಲ್ಕು ಕಡೆ ಮುಖ ಮಾಡಿರುವ ಜಿನ ತೀರ್ಥಂಕರರ ಮೂರ್ತಿ , ಬಹಳ ಅಚ್ಚುಕಟ್ಟಾಗಿ ನಿರ್ಮಿಸಿರುವ ಛಾವಣಿ , ಛಾವಣಿಯ ಸುತ್ತಲೂ ಇರುವ ಗೋಪುರಗಳು ನೋಡಲು ಮನೋಹರವಾಗಿದೆ. ಅಲ್ಲದೇ ಈ ಸ್ಥಂಬವು ನೇಪಾಳಿ ಶೈಲಿಯಲ್ಲಿ ಇದ್ದು ಟಿಬೇಟಿಯನ್ ಶೈಲಿಯ ಸ್ಥಂಭಗಳೆಂದು ಹೇಳುತ್ತಾರೆ.
ಇಂದು ಬೆಳ್ತಂಗಡಿ ಬಸದಿಗಳೆಂದು ಕರೆಯಲ್ಪಡುವ ಬಸದಿಗಳ ಸಮುಚ್ಚಯದಲ್ಲಿ ಮೂರು ಬಸದಿಗಳಿವೆ. ಅವುಗಳ ಪೈಕಿ ಮಧ್ಯದಲ್ಲಿರುವುದು ಶ್ರೀ ಶಾಂತಿನಾಥ ಸ್ವಾಮಿ ಬಸದಿ . ಈ ಬಸದಿಯನ್ನು ಶ್ರೀ ಶಾಂತೇಶ್ವರ ಬಸದಿಯೆಂದು, ಶಾಂತಿನಾಥೇಶ್ವರ ಬಸದಿಯೆಂದು , ದೊಡ್ಡ ಬಸದಿಯೆಂದು ಕರೆಯಲಾಗುತ್ತದೆ.
ಇಲ್ಲಿಯ ಮೂರು ಬಸದಿಗಳ ಪೈಕಿ ಇದು ಅತ್ಯಂತ ಹಿರಿಯಲಾಗಿದೆ. ಇದನ್ನು ಯಾರು ಯಾವಾಗ ನಿರ್ಮಿಸಿದರೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ . ಬಂಗಾಡಿಯನ್ನು ಆಳುತ್ತಿದ್ದ ಅರಸ 2ನೇ ಕಾಮರಾಯ ಬಂಧ ಈತನಿಂದಲೇ ಈ ಬಸದಿಗೆ ಭೂದಾನ ಕಾರ್ಯ ನೆರವೇರಿರಬೇಕು ಇನ್ನೊಂದು ಮುಖ್ಯ ವಿಷಯವೇನೆಂದರೆ ಕೆಳದಿಯ ನಾಯಕರು ಈ ರಾಜ್ಯದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು ಅವರಲ್ಲಿ ಒಬ್ಬರಾದ ಕೆಳದಿ ಸೂರಪ್ಪ ನಾಯಕ ಕ್ರಿ. ಶ 1645 ರಿಂದ 1660 ಬೆಳ್ತಂಗಡಿಯ ಕೋಟೆಯನ್ನು ನಾಶ ಗೊಳಿಸಿ ದಾಂಧಲೆ ಎಬ್ಬಿಸಿದ್ದ ಆಗ ಅಲ್ಲಿದ್ದ ಶ್ರೀ ಪಾರ್ಶ್ವನಾಥ ಬಸದಿ ಯು ದಾಳಿಗೆ ತುತ್ತಾಯಿತು. ಆದುದರಿಂದ ಅಲ್ಲಿ ಪೂಜಿಸಲ್ಪಡುವ ಶ್ರೀ ಪಾರ್ಶ್ವನಾಥ ಸ್ವಾಮಿಯ ಸುಮಾರು 4.50 ಅಡಿ ಎತ್ತರದ ಸುಂದರ ಶಿಲಾ ಬಿಂಬವನ್ನು ಈ ಬಸದಿಗೆ ತಂದು ಘಂತಾ ಮಂಟಪದಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು. ಅಲ್ಲಿಯೇ ಹೊಸದಾಗಿ ಒಂದು ಬಾಗಿಲು ತೆಗೆದು ಪೂಜೆಯನ್ನು ನಡೆಸುತ್ತಿದ್ದರು. ಆದರೆ ಈ ನಯನ ಮನೋಹರ ಮೂರ್ತಿಯನ್ನು ಈಗ ಪುನಃ ನಿರ್ಮಾಣಗೊಂಡ ಈ ಬಸದಿಯ ಮೇಲೆ ನೆಲೆಯ ಗರ್ಭಗುಡಿಯ ಒಂದು ಪೀಠದಲ್ಲಿರಿಸಲಾಗಿದೆ. ಹಾಗೆಯೇ ಇಲ್ಲಿನ ಪದ್ಮಪೀಠದ ಮೇಲೆ ಪ್ರಶಾಂತ ಮುಖಭಾವದಿಂದ ಮೂರ್ತಿಯು ನಿಂತುಕೊಂಡಿದೆ. ಇಲ್ಲಿಗೆ ಹೋಗಲಿಕ್ಕಾಗಿ ತೀರ್ಥಂಕರರ ಮಂಟಪದ ಹಿಂದೆ ನಿರ್ಮಿಸಲ್ಪಟ್ಟಿದ್ದ ಮೆಟ್ಟಿಲುಗಳನ್ನು ಹಾಗೆಯೇ ಉಳಿಸಿಕೊಳ್ಳುವುದರ ಜೊತೆಗೆ ಹೊರಗಿನಿಂದಲೇ ನೂತನವಾಗಿ ಹೊಸ ಅಲಂಕೃತ ಮೆಟ್ಟಿಲುಗಳನ್ನು ನಿರ್ಮಿಸಿ ಶ್ರಾವಕರ ಅನಿರ್ಭಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೆಟ್ಟಿಲುಗಳ ಸಾಲಿನ ಮಧ್ಯದಲ್ಲಿ ಹೊಸದಾಗಿ ಒಂದು ಮಂಟಪವನ್ನು ರಚಿಸಿ ತನ್ಮೂಲಕ ಕೆಳಗಡೆ ಒಂದು ಮಂಟಪವನ್ನು ನಿರ್ಮಿಸಿ, ಮೇಲುಗಡೆ ಪಂಚ ಸ್ಥಂಭ ಬ್ರಹ್ಮ ಮತ್ತು ಮಾನಸ್ಥಂಭ ಮೇಲಿನ ಮಂಟಪದಲ್ಲಿರುವ ಜಿನೇಶ್ವರನ ನೇರವಾದ ದರ್ಶನಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.
ಕೆಳಗಡೆ ಗರ್ಭಗೃಹದಲ್ಲಿ ಮೂಲ ನಾಯಕ ಶ್ರೀ ಶಾಂತಿನಾಥ ಸ್ವಾಮಿಯ ವಿಗ್ರಹವು ವಿರಾಜಮಾನವಾಗಿದೆ. ಹಿಂದೆ ಅಂತರಾಳ ಇದ್ದ ಸ್ಥಾನದಲ್ಲಿ ನೂತನವಾಗಿ ಶ್ರೀ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಇಕ್ಕೆಲೆಗಳಲ್ಲಿ ಗಂಧಕುಟಿಯನ್ನು ನಿರ್ಮಿಸಿದ್ದು ಅದರೊಳಗೆ ಚತುರ್ವಂಶಿ ಶ್ರೀ ತೀರ್ಥಂಕರರ ಮೂರ್ತಿಗಳನ್ನು ಇಡಲಾಗಿದೆ. ಈ ಬಸದಿಯನ್ನು ಪ್ರವೇಶಿಸುತ್ತಲೇ ಎದುರಿಗೆ ಶ್ರೀ ಪದ್ಮಾವತಿ ದೇವಿಯ ವಿಗ್ರಹದ ಇಕ್ಕಲೆಗಳಲ್ಲಿ ಗಂಧಕುಟಿಯು ಹಿಂದೆ ಗರ್ಭಗುಡಿಯಲ್ಲಿ ಶ್ರೀ ಶಾಂತಿನಾಥಸ್ವಾಮಿಯ ಮೂರ್ತಿಯು ಇದ್ದು ಅತ್ಯಾನಂದ ಕೊಡುವ ಒಂದು ದೇವಸಾನಿಧ್ಯ ನಿರ್ಮಾಣವಾಗಿರುವುದು ಅನುಭವವಾಗುತ್ತದೆ.
ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಶ್ರೀ ಶಾಂತಿನಾಥ ಬಸದಿಯ ಎಡಭಾಗಕ್ಕಿದೆ . ಇದು ಗಾತ್ರ ದಲ್ಲಿ ಬಹಳ ಚಿಕ್ಕದು. ಇದನ್ನು ಬಂಗರ ಬಸದಿಯೆಂದು ಹಾಗೂ ಕಾಮಂದ ಬಸದಿಯೆಂದು ಕರೆಯುತ್ತಾರೆ. ಇದು ಭಂಗ ಅರಸರಲ್ಲಿ ಒಬ್ಬನಾದ ನರಸಿಂಹಬಂಗ ಎಂಬುವವನು ಕ್ರಿ.ಶ 1484 ರಲ್ಲಿ ನೆಲೆಸಿದ್ದನೆಂದು ಇಲ್ಲಿನ ಶಿಲಾಶಾಸನದ ಆಧಾರದಿಂದ ಧಾರಾಳವಾಗಿ ಹೇಳಬಹುದು. ಪ್ರಾರ್ಥನಾ ಮಂಟಪ ಅಂತರಾಳ ಮತ್ತು ಗರ್ಭಗೃಹ ಎಂಬ ಮೂರು ಬಾಹುಗಳನ್ನು ಹೊಂದಿದೆ. ಈ ಜಿನಮಂದಿರಗಳಲ್ಲಿ ಪೂಜಿಸ್ಲಡುವ ಮೂಲ ನಾಯಕ ಬಿಂಬಗಳು ಬಹಳ ಸುಂದರವಾಗಿವೆ. ಅಲಂಕೃತ ಪದ್ಮಪೀಠದ ಮೇಲೆ ನಿಸರ್ಗ ಭಂಗಿಯಲ್ಲಿ ಇರುವ ಈ ಕರಿಶಿಲಾ ಮೂರ್ತಿಗೆ ಸುತ್ತಲೂ ಆಕರ್ಷಕ ವಾದ ಪ್ರಭಾವಳಿಯಲ್ಲಿ ಇದೆ. ತುಂಬು ಜೀವಕಳೆ ಚೆಲುವುನಿಂದ ಕಂಗೊಳಿಸುತ್ತಿರುವ ಇಲ್ಲಿ ಒಂದು ಆಧ್ಯಾತ್ಮಿಕ ಸ್ಪಂದನವೂ ನೆಲೆಗೊಂಡಿರುವಂತೆ ಭಾಸವಾಗುತ್ತಿದೆ.
ಇಲ್ಲಿರುವ ಮತ್ತೊಂದು ಬಸದಿ ಶ್ರೀ ಅನಂತನಾಥ ಬಸದಿ ಇದು ಶ್ರೀ ಶಾಂತಿನಾಥಸ್ವಾಮಿಯ ಬಲಭಾಗಕ್ಕಿದೆ ಇದನ್ನು ಕೆಲವು ದಾಖಲೆಗಳಲ್ಲಿ ದ್ವಾರ ಬಸದಿಯೆಂದು ಕರೆಯಲಾಗಿದೆ. ಇದರ ಮೂಲ ನಾಯಕ ಶ್ರೀ ಅನಂತನಾಥ ಸ್ವಾಮಿ . ಈ ಬಸದಿಯ ನಿರ್ಮಾಣ ಮತ್ತು ಇದರ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಹೆಚ್ಚು ದಾಖಲೆಗಳು ಲಭ್ಯವಿಲ್ಲ . ಇದನ್ನು ಕಡೆಯ ಬೀಡಿನವರು ಇದನ್ನು ನಿರ್ಮಿಸಿದ್ದರೆಂದು ಹೇಳುತ್ತಾರೆ, ಈ ಬಸದಿ ಸುಮಾರು 176 ವರ್ಷಗಳಿಂದ ಈಚೆಗೆ ನಿರ್ಮಾಣಗೊಂಡಿರಬೇಕೆಂದು ಕಾಣುತ್ತದೆ. ವಿಸ್ತಾರವಾದ ಹೊಸ ಮಂಟಪವನ್ನು ಹೊರಗೆ ಆಧಾರದ ಹೊಸ ಶಿಲಾಸ್ಥಂಭವನ್ನು ಮಾಡಿನ ಮೇಲೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಮೇಲುಗಡೆ ಇರುವಂತೆ ನೂತನ ಕಳಸದ ಆಕೃತಿಯನ್ನು ಹೊಂದಿ ಕಂಗೋಳಿಸುತ್ತಿರುವ ಮೂಲ ನಾಯಕ ಸ್ವಾಮಿಯ ಬಿಂಬ ಬಹಳ ಸುಂದರವಾಗಿದೆ. ಪಂಚಲೋಹದಿಂದ ನಿರ್ಮಿಸಲ್ಪಟ್ಟಿವೆ. ಪೀಠದ ಮೇಲಿರುವ ಈ
ಅಂಕಣದ ಮೇಲೆ 24 ಇಂಚು ಸುಂದರ ಮೂರ್ತಿಯು ವಿರಾಜಮಾನವಾಗಿದೆ.
ಐದು ಶಿಲಾ ಸ್ಥಂಭದ ಮೇಲೆ ಒಂದು ಚಿಕ್ಕ ಗುಡಿಯನ್ನು ನಿರ್ಮಿಸಿ ಅದರೊಳಗೆ ಬ್ರಹ್ಮ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಈ ಬಸದಿ ಸಮುಚ್ಚಯದಲ್ಲಿರುವುದು ಒಂದು ವಿಶೇಷ. ಎತ್ತರದ ಒಂದು ಶಿಲಾ ಪೀಠದ ಮೇಲೆ ನಾಲ್ಕು ಮೂಲೆಗಳಲ್ಲಿ ನಾಲ್ಕು ಕಂಬಗಳಿವೆ. ಅವುಗಳ ಮಧ್ಯದಲ್ಲಿರುವ ಕಂಬವು ಒಂದು ಮಾನಶ್ಥಂಭವನ್ನೇ ಹೋಲುತ್ತದೆ. ಒಂದು ಬಾಗಿಲು ಮಾತ್ರವಿರುವ ಈ ಒಂದು ಮಂಟಪದಲ್ಲಿ ಬ್ರಹ್ಮ ದೇವರನ್ನು ಪ್ರತಿಷ್ಠಾಪಿಸಲಾಗಿದೆ.














