ಜೈ ಜಿನೇಂದ್ರ ವೀಕ್ಷಕರೆ ಧರ್ಮಸ್ಥಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಇನ್ನು ದಿನ ಗಣನೆಯಲ್ಲ ಇನ್ನು ಕ್ಷಣಗಣನೆ ಮಾತ್ರ, ಬನ್ನಿ ವೀಕ್ಷಕರೆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಕ್ಷಣ ಬಂದೆ ಬಿಟ್ಟಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಚಾಲನೆ ಪರಮ ಪೂಜ್ಯ ಅಚಾರ್ಯರು ಮುನಿಗಳು ಸಮಸ್ತ ಭಟ್ಟಾರಕರ ಪಾವನ ಸಾನಿಧ್ಯದಲ್ಲಿ, ಹಾಗೂ ಧರ್ಮಾಧಿಕಾರಿ ರಾಜ್ಯಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಜಲಾಭಿಷೇಕಗಳ ಮೂಲಕ ನಡೆಯಿತು.
ಜೀವನ ಪೂರ್ಣಗೊಳ್ಳ ಬೇಕಾದರೆ ಜೀವನು ಜಿನನಾಗ ಬೇಕು, ಪೂಜೆಯು ಪೂರ್ಣಗೊಳ್ಳ ಬೇಕಾದರೆ ಪೂರ್ಣ ಕುಂಭ ಕಳಶಾಭಿಷೇಕವಾಗ ಬೇಕು, ಬನ್ನಿ ಆ ಪೂರ್ಣತ್ವವನ್ನು ಸಾಧಿಸೊಣ.
(ಪರಮ ಪೂಜ್ಯ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾತನಾಡಿ ಈ ಬಾರಿ ಮಹಾಮಸ್ತಕಾಭಿಷೇಕದ ವಿಶೇಷವನ್ನು ನಾವು ಎಂದಿಗೂ ನೋಡಿರುವುದಿಲ್ಲಾ ಎಂದರು ಮತ್ತು ವೀರೇಂದ್ರ ಹೆಗ್ಗಡೆಯವರ ಕಾರ್ಯ ವೈಖರಿಗೆ ಅಭಿನಂದಿಸಿದರು).
ಪಾವನ ಸಂದರ್ಭದಲ್ಲಿ ಶ್ರಾವಕ ಶ್ರಾವಕಿಯರು ಬಹು ಶ್ರದ್ದೆಯಿಂದ ಅಲಂಕರಿಸಿದ 1008 ಕಳಶಗಳಿಂದ ಶ್ರದ್ದಾ ಕಳಶ , ದಿವ್ಯ ಕಳಶ , ಜಲ ಮಂಗಳ ಕಳಶದಿಂದ 39ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಗೆ ಮಜ್ಜನಗೈದರು.
(ಗಣ್ಯರು ಮಾತನಾಡಿ ಮಹಾಮಸ್ತಕಾಭಿಷೇಕಕ್ಕೆ ಸಾವಿರಾರು ಜನ ಭಾಗವಹಿಸಿರುವುದಕ್ಕೆ ಅಭಿನಂದಿಸಿದರು. ಬಣ್ಣ ಬಣ್ಣದ ಅಭಿಷೇಕವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು).
ಶ್ರೀ ಮಾನ್ ಹೆಗ್ಗಡೆಯವರ ಕುಟುಂಬಸ್ಥರಿಂದ ನಾರಿಕೇಳದ ಅಭಿಷೇಕ. ಪವಿತ್ರವಾದ ಕಲ್ಪವೃಕ್ಷದಿಂದ ಉತ್ಪತ್ತಿಯಾದ ಎಳನೀರಿನಿಂದ ಲೋಕಪೂಜ್ಯನಿಗೆ ಅಭಿಷೇಕಗೈಯಲಾಗುತ್ತಿದೆ.
ನಂತರದ ಅಭಿಷೇಕ ಇಕ್ಷುರಸದ ಅಭಿಷೇಕ, ಇಕ್ಷಾಕು ವಂಶಸ್ಥನಾದ ಅಜಾನು ಬಾಹುವಿಗೆ ಕಬ್ಬಿನ ಹಾಲಿನ ಮೂಲಕ ಅಭಿಷೇಕ ಮಾಡಲಾಗುತ್ತದೆ.
ಮಹಾಮಸ್ತಕಾಭಿಷೇಕ 2019ರಂದು ನಾಲ್ಕನೆ ಬಾರಿ ನಡೆಯುತ್ತಿದೆ, 1986ರಲ್ಲಿ ಮೊದಲ ಬಾರಿಯ ಮಹಾಮಸ್ತಾಕಾಭಿಷೇಕ ನಡೆದಿತ್ತು. ವೀಕ್ಷಕರೆ ಈ ಬಾರಿ ನಡೆಯುತ್ತಿರುವ ಮಹಾಮಸ್ತಾಕಾಭಿಷೇಕವನ್ನು ಕಣ್ತುಂಬಿಕೊಳ್ಳಿ.
ಕ್ಷೀರ ಸಾಗರದ ಅಲೆಗಳೆ ಎದ್ದು ಬಂದು ನರೇಂದ್ರನಿಗೆ ಮಜ್ಜನಗೈಯುತ್ತಿರುವಂತೆ ಸಮುದ್ರದ ಅಲೆಗಳು ಒಂದರಿಂದೊಂದಂತೆ ತೇಲಿ ಬಂದಂತೆ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಅಭಿಷೇಕ ಕ್ಷೀರಾಭಿಷೇಕ.
ಮುಂಜಾನೆ ಮುಗಿಲಿನಿಂದ ಮೋಡಗಳು ತೇಲಿಬಂದು ಮನ್ಮತ ರೂಪಿಯನ್ನು ಚುಂಬಿಸಿ ಸಾಗಿದಂತೆ, ಕಲೆಗಾರನ ಕುಂಚದಿಂದ ಮೂಡಿಬಂದ ಚಿತ್ತಾರದಂತೆ ಕಲ್ಪನೆ ಕೊಡುವ ಕಲ್ಕ ಚೂರ್ಣದ ಅಭಿಷೇಕವನ್ನು ನೋಡುತ್ತಿದ್ದಿರಿ.
ಚಿನ್ಮಯ ರೂಪನ ಚಿನ್ನದ ವರ್ಣದಲ್ಲಿ ಕಂಡು ರಂಗಿನಲ್ಲಿ ಮಿಂದ ಅವನ ಕಂಡ ಕಣ್ಣುಗಳು ಧನ್ಯತೆಯ ಭಾವದಿಂದ ಮಿನುಗುವುದು.
(ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಮಾತನಾಡಿ ಈ ಬಾರಿ ನಡೆಯುತ್ತಿರುವ 4ನೇ ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿರುವ ಶ್ರಾವಕ ಶ್ರವಕಿಯರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಮಸ್ತಕಾಭಿಷೇಕದ ವೈಬವಕ್ಕೆ ಸಂತಸವ್ಯಕ್ತಪಡಿಸಿದರು).
ನಾಲ್ಕು ದಿಕ್ಕುಗಳು ಅಭಿಷೇಕದಲ್ಲಿ ಪಾಲ್ಗೋಂಡಿದೆ ಎನ್ನುವ ಬಾವವನ್ನುಂಟ್ಟು ಮಾಡುವುದು ಚತುಷ್ಕೋನ ಕಳಶಾಭಿಷೇಕ.
ಈ ಸುಸಂದರ್ಭದಲ್ಲಿ ಕಾಶ್ಮೀರದಿಂದ ತರಲಾದ ಕೇಸರಿಯಿಂದ ಅಭಿಷೇಕಗೈದು ಶಾಂತಿಯ ಮಾರ್ಗವನ್ನು ಲೋಕಕ್ಕೆ ಪರಿಚಯಿಸುವ ಗೊಮ್ಮಟನ ನೀತಿಯನ್ನು ಸಾರಿ ವಿಶ್ವ ಶಾಂತಿಯ ಆಶಯವನ್ನು ಬಿಂಬಿಸಲಾಗಿದೆ.
ಪರಿಮಳಯುತವಾದ ಗಂಧದ ಅಭಿಷೇಕದಿಂದ ತನ್ನ ಗುಣದಿಂದ ವಾತಾವರಣವನ್ನೇ ಸುವಾಸನಮಯವನ್ನಾಗಿಸಿ ಸ್ವರ್ಗದಲ್ಲಿ ವಿಹರಿಸಿದ ಬಾವವನ್ನುಂಟು ಮಾಡುತ್ತದೆ. ವೀಕ್ಷಿಸಿ ಹಂತ ಗಂಧದ ಅಭಿಷೇಕದ ಕ್ಷಣಗಳನ್ನು.
ಚಲುವಾದ ಚನ್ನಿಗನಿಗೆ ಚಂದನದಿಂದ ಅಭಿಷೇಕಗೈದಾಗ ಮುದ್ದಾದ ಚಂದನದ ಗೊಂಬೆಯಂತೆ ಮೂರ್ತಿ ಗೋಚರಿಸುವುದನ್ನು ನೀವಿಲ್ಲಿ ಕಾಣಬಹುದು.
ಅಸನ್ಮುಖಿಯಾದ ಸುರದೃಪಿಯು ಅಷ್ಟ ಗಂಧದ ಅಭಿಷೇಕದಲ್ಲಿ ಹವಳದ ರೂಪವನ್ನು ತಾಳಿದ ಭವ್ಯವಾದ ದೃಶ್ಯವನ್ನು ನೋಡುವ ಭಾಗ್ಯ ನಮ್ಮದಾಗಿದೆ.
ವಿವಿಧ ಪುಷ್ಪಗಳಿಂದ ಅಭಿಷೇಕಗೈದು ಸುಂದರ ಸುಹಾಸನಯುತ ಹೂವಿನ ಹಾರದಿಂದ ಪೌದನೇಶನನ್ನು ಸಿಂಗರಿಸಿ ಮಂಗಳಾರತಿ ನೆರವೇರಿಸಲಾಯಿತು.
ಇಂದು ಪ್ರತಿಷ್ಟಾಪಕರು ಮತ್ತು ಶ್ರಾವಕರಿಂದ ನಡೆದ ರಂಗಿನ ಪರಿವರ್ತನೆಯ ಮಸ್ತಕಾಭಿಷೇಕವನ್ನು ನೋಡಿದಿರಿ.
ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














