ಜೈಜಿನೇಂದ್ರ ವೀಕ್ಷಕರೆ, ಭಗವಾನ್ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನ ಮಂದಿರದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಪ್ರತಿವರ್ಷದಂತೆ ಅವರ ನೇತೃತ್ವದಲ್ಲಿ ದಿನಾಂಕ 16, 17, 18 ರಂದು ಅನಂತನೋಂಪಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ಜನ ವ್ರತಿಕರು ಈ ನೋಂಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರತಿನಿತ್ಯ ಬೆಳಗ್ಗೆ 6:30 ಕ್ಕೆ ಮೂಲ ಸ್ವಾಮಿ ಶ್ರೀ ಆದಿನಾಥ ಭಗವಂತರ ಹಾಗೂ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾ ಶಾಂತಿ ಮಂತ್ರ, ಪೂಜಾ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಳುತಿದ್ದವು. ಶ್ರೀ ಅನಂತನಾಥ ತ್ರೇಯೋದಶಿ ದಿನದಂದು ಪರಮ ಪೂಜ್ಯ ಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಶ್ರೀ ಕ್ಷೇತ್ರ ಕನಕಗಿರಿ ಮತ್ತು ಪರಮ ಪೂಜ್ಯ ಧರ್ಮಸೇನಾ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ವರೂರು ಇವರು ಸಹ ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಪಾವನ ಸಾನಿಧ್ಯವನ್ನು ವಹಿಸಿ ಪೂಜಾ ವಿಧಿವಿಧಾನವನ್ನು ಅರ್ಥಸಹಿತ ವಿಸ್ತಾರವಾಗಿ ಪೂಜೆಯನ್ನು ನಡೆಸಿಕೊಟ್ಟರು. ಚತುರ್ದಶಿಯಂದು ಲೋಕಾರ್ಪಣೆಗೊಂಡ ಅನಂತನಾಥ ತೀರ್ಥಂಕರರ ನೋಂಪಿ ಪೂಜಾ ಸಂಗ್ರಹ ಗ್ರಂಥದಿಂದ ಪೂಜಾ ವಿಧಾನವನ್ನು ಮತ್ತು ನೋಂಪಿಯ ಅನಂತ ದಾರದ 14 ಗಂಟುಗಳ ಬಗ್ಗೆ ಒಂದೊಂದು ಗಂಟುಗಳ ಬಗ್ಗೆಯೂ ವಿಸ್ತಾರವಾಗಿ ಅರ್ಥಸಹಿತವಾಗಿ ತಿಳಿಸಿ ನೋಂಪಿಯು ವ್ರತಿಕರಿಗೆ ಶ್ರದ್ದೆಯಿಂದ ಭಕ್ತಿಯಿಂದ ಪೂಜೆಯನ್ನು ಶ್ರೀ ಸೋಂದಾ ಸ್ವಾಮೀಜಿಯವರು ಮಾಡಿಸಿದರು.
ಸತತ 10 ವರ್ಷಗಳಿಂದ ದಾವಣಗೆರೆ ಶ್ರೀ ಆಧಿನಾಥ ಜಿನ ಮಂದಿರದಲ್ಲಿ ಸೋಂದಾ ಭಟ್ಟಾರಕ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಅನಂತನೋಂಪಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು ಅವರಿಗೂ ಸಹ ಈ ಸಂದರ್ಭದಲ್ಲಿ ಭಕ್ತಿ ಸಮರ್ಪಿಸಲಾಯಿತು. ಸೋಂದಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ದಾವಣಗೆರೆಯ ಜೈನ ಬಾಂಧರು ದೇಣಿಗೆ ನೀಡಿದರು.
ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೂ ಸಹ ಭಕ್ತಿ ಪೂರ್ವಕವಾಗಿ ಗೌರವ ಸಮರ್ಪಣೆ ನಡೆಸಲಾಯಿತು. ಕನಕಗಿರಿಯ ಪೂಜ್ಯ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ನಡೆಸುತ್ತಿರುವ ಗೋಶಾಲೆಗೆ ದಾವಣಗೆರೆಯ ಶ್ರೀ ಮಹಾವೀರ ಸಂಘದ ವತಿಯಿಂದ 51 ಸಾವಿರ ರೂಗಳ ದೇಣಿಗೆಯನ್ನು ನೀಡಲಾಯಿತು. ವರೂರು ಕ್ಷೇತ್ರದಲ್ಲಿ ನಿರ್ಮಾಣಗೊಂಡ ಸುಮೇರು ಪರ್ವತದ ಪಂಚಕಲ್ಯಾಣ ನಿಮಿತ್ತವಾಗಿ ಸಮಸ್ತ ದಿಗಂಬರ ಜೈನ ಸಮಾಜ ಮತ್ತು ಶ್ರೀ ಮಹಾವೀರ ಸಂಘದಿಂದ ದೇಣಿಗೆಯನ್ನು ನೀಡಲಾಯಿತು. ಕ್ಷಮಾವಳಿಯ ದಿನ ಜಿನ ಸಹಸ್ರ ನಾಮ ಪುಷ್ಪಾರ್ಚನೆ ಮಾಡಿಸಿ ಸಮಸ್ತ ಜೀವರಾಶಿಗಳಿಗೆ ಕ್ಷಮಾಯಾಚನೆ ಮಾಡುವ ಕ್ಷಮಾವಳಿ ಕಾರ್ಯಕ್ರಮವನ್ನು ಶ್ರೀಗಳವರು ನೆರವೇರಿಸಿಕೊಟ್ಟರು.
ದಾವಣಗೆರೆಯಲ್ಲಿ ಸಂಭ್ರಮ ಸಡಗರ ಸಂತೋಷದಿಂದ ಭಕ್ತಿಪೂರ್ವಕವಾಗಿ ಸುಖದಾಯಕವಾಗಿ ಭಗವಂತರ ಆಶೀರ್ವಾದ ಜಿನ ಶಾಸನ ದೇವತೆಗಳ ಅನುಗ್ರಹದಿಂದ ಪೂಜ್ಯಶ್ರೀ ಸ್ವಾಮೀಜಿಯವರ ಕೃಪೆಯಿಂದ ನೋಂಪಿ ಕಾರ್ಯಕ್ರಮ ಸಂಪ್ರದಾಯ ಪ್ರಕಾರ ಬಾಗಿಣ ಸಮರ್ಪಿಸುವುದರ ಮೂಲಕ ಪೂಜಾ ಕಾರ್ಯಕ್ರಮವು ಸಂಪನ್ನಗೊಂಡಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














