ದೇವರಮನೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಮೂರ್ನಾಡು ಗ್ರಾಮವು ಕುದುರೆಮುಖ ಪರ್ವತದ ಬುಡದಲ್ಲಿದೆ. ಸುಂದರ ಪ್ರಕೃತಿ ತಾಣದಲ್ಲಿ ಸೋಮಾವತಿ ನದಿಯ ಇಕ್ಕೆಲಗಳಲ್ಲಿ ಪವಿತ್ರ ಜಲವನ್ನು ಉಣಿಸುತ್ತಾ ಕಳಸ ಹೋಬಳಿಯ ಸನಿಹದಲ್ಲಿ ಬೆಳೆಯುತ್ತಿದೆ. ಈ ಊರಿನ ಪರಂಪರೆಯು ಜೈನರದ್ದಾಗಿದ್ದು ಭೈರವರಸನ ಆಳ್ವಿಕೆಗೂ ಕಾರ್ಕಳ ಮಠದ  ಸಾಮುಹಿಕ್ ಒಳಪಟ್ಟಿದ್ದು ಇಲ್ಲಿಯ ಮೂಲ ಬಸದಿಯ ತೀರ್ಥಂಕರರಾದ 1008 ಶ್ರೀ ಶಾಂತಿನಾಥ ಸ್ವಾಮಿ ಚಿಕ್ಕಬಸದಿಯ ಶ್ರೀ ಚಂದ್ರಪ್ರಭಸ್ವಾಮಿ ಹಾಗೂ ಜಿನಶಾಸನ ಯಕ್ಷ ಯಕ್ಷಿಯರಾದ ಬ್ರಹ್ಮೇಶ್ಯ , ಶ್ರೀ ವರಮಹಾಲಕ್ಷ್ಮಿ, ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನವಿದೆ. ಪರಂಪರೆಯಿಂದ ಎಲ್ಲಾ ಬಸದಿ ಮತ್ತು ದೇವಸ್ಥಾನಗಳ ಪೂಜಾ ಕೈಂಕರ್ಯಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ  ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿದೆ. ಅಂದಿನಿಂದ ಇಂದಿನವರೆಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವೈಭವೇಪೇತವಾಗಿ ಸಂಪನ್ನಗೊಳ್ಳುತ್ತಾ ಬರುತ್ತಿದೆ. ಈ ಊರಿನಲ್ಲಿ ವರ್ಷಕ್ಕೊಮ್ಮೆ ಬರುವ ಜಾತ್ರಾ ಮಹೋತ್ಸವವು ಶ್ರೀ ಶಾಂತಿನಾಥ ಸ್ವಾಮಿ ಸಮವಸರಣದ  ಪ್ರತೀಕವಾಗಿದೆ. ಇಲ್ಲಿಯ ಶ್ರೀ ಪದ್ಮಾವತಿ ಅಮ್ಮನವರ ಮೂಲ ಸ್ಥಾನವೆಂದು ಹೆಸರಾದ  ದೇವರಮನೆ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವದ ಮೂಲಕ ಬಂದು ಮೂಲ ಮೂರ್ತಿಯೊಂದಿಗೆ ಉಯ್ಯಾಲೆಯೊಂದಿಗೆ ವಿರಾಜಮಾನರಾಗಿ ವಸಂತಪೂಜೆಯೊಂದಿಗೆ ಭಕ್ತಾದಿಗಳ ಅಭೀಷ್ಟವನ್ನು ನೆರವೇರಿಸಿಕೊಡುವ ಮಹಾಮಾತೆ ಎಂದೇ ಪ್ರಸಿದ್ದಿ .

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಮೂರ್ನಾಡು ಗ್ರಾಮವು ಕುದುರೆಮುಖ ಪರ್ವತದ ಬುಡದಲ್ಲಿದೆ ಈ ಸಂಸೆ ಗ್ರಾಮದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮನಮೋಹಕವಾಗಿರುವಂತಹ ಒಂದು ಸುಂದರ ಬಸದಿ ದೇವರಮನೆ ಬಸದಿ. ಇಲ್ಲಿನ ಮೂಲ ನಾಯಕ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿ ಉಯ್ಯಾಲೆಯಲ್ಲಿ ನಿಂತ ಭಂಗಿಯಲ್ಲಿದ್ದಾಳೆ. ಈ ಜಿನಾಲಯವು ಸುಮಾರು 7 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ಈ ದೇವಸ್ಥಾನದ ನಿತ್ಯ ಪೂಜೆಯನ್ನು ಐದು ಮನೆತನದವರು ನಡೆಸುತ್ತಿದ್ದು ಅವರು ಸಣ್ಣ ಕೃಷಿಕರಾಗಿದ್ದಾರೆ. ಇಲ್ಲಿ ಹಿಂದಿನಿಂದಲೂ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮೂರ್ತಿ ಇದ್ದು ಅಭಿಷೇಕ ಪೂಜಾದಿಗಳು ನಡೆಯುತ್ತಾ ಬರುತ್ತಿತ್ತು. ಜಿನಾಲಯವು ಅಜೀರ್ಣಗೊಂಡಿದ್ದನ್ನು ಮನಗಂಡ ದೇವಸ್ಥಾನ ಅಭಿವೃದ್ದಿ ಸಮಿತಿಯವರು 2015ನೇ ಇಸವಿಯಲ್ಲಿ ಬಸದಿಯನ್ನು ಕಲ್ಲಿನಿಂದ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಯಿತು. ನಂತರ ಆಚಾರ್ಯ 108 ಗುರು ಸಚ್ಚಿದಾನಂದ ಮಹಾರಾಜರ ಮಾರ್ಗದರ್ಶನದಲ್ಲಿ ವಾಸ್ತು ಪೂಜೆ ನೆರವೇರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಊರ ಮತ್ತು ಪರ ಊರ ದಾನಿಗಳ ನೆರವಿನಿಂದ ಹಾಗೂ ಶ್ರೀ ಕೆ.ಸಿ ಧರಣೇಂದ್ರರವರ ಅಧ್ಯಕ್ಷತೆಯಲ್ಲಿ 2018ರಲ್ಲಿ ಈ ಹಿಂದಿನ ಬಸದಿಯ ಸ್ಥಾನದಲ್ಲಿಯೇ ಹೊಸ ಬಸದಿಯನ್ನು ನಿರ್ಮಾಣ ಮಾಡಲಾಯಿತು. ಪಂಚ ಲೋಹದ ಎರಿಕೆಯಿಂದ 21 ಇಂಚಿನ ಹೊಸ ಮೂರ್ತಿಯನ್ನು ಮಾಡಿಸಲಾಯಿತು. ದಿನಾಂಕ 2/5/2018 ರಿಂದ 6/5/2018 ರವರೆಗೆ ಪೂಜ್ಯ ಬಾಲಾಚಾರ್ಯ 108 ಪಾವನಕೀರ್ತಿ ಮುನಿಮಹಾರಾಜರ ಮತ್ತು 108 ಪ್ರಸಂಗಸಾಗರ ಮುನಿಮಹಾರಾಜರ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವೈಭವದಲ್ಲಿ ಪಂಚಕಲ್ಯಾಣಪೂರ್ವಕ ಬಿಂಬ ಪ್ರತಿಷ್ಠೆ ಮಾಡಲಾಯಿತು. 2022 ರಲ್ಲಿ ಗಂಧಕುಟಿ ಪರಮಪೂಜ್ಯ 108 ಆದಿತ್ಯಸಾಗರ ಮುನಿಮಹಾರಾಜರ  ಪೂರ್ಣ ಸಹಕಾರದೊಂದಿಗೆ ಪಂಚಕಲ್ಯಾಣ ನಡೆಸಿದ 24 ತೀರ್ಥಂಕರರ ಬಿಂಬವನ್ನು ಮಧ್ಯಪ್ರದೇಶದ ಚಂದವಾಡದಿಂದ ತಂದು ಸ್ಥಾಪಿಸಲಾಯಿತು. 2023 ಮೇ ತಿಂಗಳಲ್ಲಿ ಪರಮಪೂಜ್ಯ 108 ವೀರ ಸಾಗರ ಮುನಿಮಹಾರಾಜರ ಮಾರ್ಗದರ್ಶನದಲ್ಲಿ ಧರ್ಮಾತ್ಮರಾದ ಶ್ರೀಮತಿ ಮತ್ತು ಶ್ರೀ ಪಾರ್ಶ್ವನಾಥಯ್ಯ ದಂಪತಿಗಳು ಚಳ್ಳಕೆರೆ ಇವರ ಉದಾರ ದಾನದಿಂದ ಹಾಗೂ ಊರಿನ ಹಾಗೂ ಪರ ಊರಿನ ನೆರವಿನಿಂದ 25 ಅಡಿ ಎತ್ತರದ ಮಾನಸ್ಥಂಬವನ್ನು ನಿರ್ಮಿಸಿ ಪಂಚಕಲ್ಯಾಣ ಪೂರ್ವಕ ಶ್ರೀ ಜಿನಬಿಂಬದ ಬಿಂಬ ಪ್ರತಿಷ್ಠೆ ಮಾಡಲಾಯಿತು. ಪ್ರಸ್ತುತ ಈ ಬಸದಿಯಲ್ಲಿ ನಿತ್ಯ ನೈವೇದ್ಯ ಪೂಜೆಗಳು ನಡೆಯುತ್ತಿವೆ. ಪೂರ್ವಾಚರ್ಯರು ಬಸದಿಯ ಪೂರ್ಣಾಚರಣೆಯನ್ನು ವರ್ಷಕ್ಕೆ ಒಬ್ಬರಂತೆ ನೇಮಿಸಿರುವುದರಿಂದ ಅವರವರ  ಜವಾಬ್ಚಾರಿಯನ್ನು ನಡೆಸಿಕೊಂಡು ಬಂದಿರುತ್ತಾರೆ.ಹಾಗೂ ಶಿಫ್ಟ್ ಕ್ರಿಯೆಗಳಲ್ಲಿ ನಿರತರಾಗಿದ್ದಾರೆ. ಈ ಬಸದಿಯು ಬಹಳ ಚಿಕ್ಕದಾಗಿರುವುದರಿಂದ ಒಳಾಂಗಣಕ್ಕೆ ಹೊರಾಂಗಣದ ಕಾಂಪೌಂಡ್ , ಇಂಟರ್ ಲಾಕ್, ತ್ಯಾಗಿಗಳು ಬಂದಾಗ ವಾಸ್ತವ್ಯಕ್ಕೆ ತ್ಯಾಗಿ ಭವನ ಇನ್ನಿತರ ಧಾರ್ಮಿಕ ಕೆಲಸಗಳು ಇದ್ದು ಧರ್ಮಾತ್ಮರನ್ನು ಎಚ್ಚರಿಸುತ್ತಿವೆ.ಆದ್ದರಿಂದ ನಮ್ಮ ನಿಮ್ಮೆಲ್ಲರ ಧರ್ಮ ರಕ್ಷಿಸುವ ಕಾರ್ಯವಾಗಲಿ.ಈ ಕ್ಷೇತ್ರದ ಅಭಿವೃದ್ದಿಯಾಗಲಿ ಧರ್ಮಾತ್ಮರ ಕರ್ಮಕ್ಷಯವಾಗಲಿ. ಜಿನಶಾಸನ ಯಕ್ಷ ಯಕ್ಷಿಯರರನ್ನು ಧರ್ಮಾತ್ಮರನ್ನು ರಕ್ಷಿಸಲಿ ಎಂದು ಆಶಿಸುತ್ತಾ ಒಮ್ಮೆಯಾದರೂ ಈ ಬಸದಿಯ ದರ್ಶನವನ್ನು ಪಡೆದು ಕೃತಾರ್ಥರನ್ನಾಗಿ ಮಾಡಿಕೊಳ್ಳಬೇಕೆಂದು ಸವಿನಯ ಭಾವನೆ.