ನಂದನಿ ಜೈನ್ ಮಾತಾ

ಕರ್ನಾಟಕದಿಂದ  ಬೆಳಗಾವಿ ಮಾರ್ಗವಾಗಿ ಚಿಕ್ಕೋಡಿಯಿಂದ 39 ಕಿಲೋಮೀಟರ್, ಇಚಲಕರಂಜಿ ಯಿಂದ 13 ಕಿಲೋಮೀಟರ್ ಮತ್ತು ಕೊಲ್ಲಾಪುರದಿಂದ 39 ಕಿಲೋ ಮೀಟರ್ ದೂರದಲ್ಲಿದೆ ಅತಿಶಯ ಕ್ಷೇತ್ರ ನಾಂದಣಿ ಹಾಗೂ ಅಲ್ಲಿನ ಜೈನ ಮಠ. ಈ ಮಠದಲ್ಲಿ ಭಗವಾನ್  ಶ್ರೀ ಆದಿನಾಥ ಸ್ವಾಮಿಯ ಸನ್ನಿಧಿ ಅಷ್ಟೆ ಅಲ್ಲ ಭಾರತದಲ್ಲೇ ಅತ್ಯಂತ ಪುರಾತನವಾದ ಜೈನ ಮಠ ನಾಂದಣಿಯಲ್ಲಿದೆ. ಈ ಮಠದಲ್ಲಿ ಸುತ್ತಲೂ ಸುಂದರ ಏಕರೀತಿಯ ಕೆತ್ತನೆಗಳನ್ನು ಒಳಗೊಂಡ 300ಕ್ಕೂ ಹೆಚ್ಚು ಕಂಬಗಳ ಆಧಾರವನ್ನು ಶ್ರೀ ಮಠಕ್ಕೆ ನೀಡಿರುವುದು ಅಲ್ಲಿನ ವೈಭವವನ್ನು ಹೆಚ್ಚಿಸುತ್ತಿದೆ. ಪರಮಪೂಜ್ಯ ಜಗದ್ಗುರು ಸ್ವಸ್ಥಿಶ್ರೀ ಜಿನಸೇನಾ ಭಟ್ಟಾರಕರು ಇಲ್ಲಿನ 100ನೇ ಪೀಠಾಧಿಪತಿಗಳಾಗಿದ್ದು ಕರ್ನಾಟಕದ ಅಥಣಿ ತಾಲ್ಲೂಕಿನ ಸಪ್ತಸಾಗರದವರಾಗಿದ್ದಾರೆ. ನೀವು ಮಠದ ಪ್ರಾಂಗಣಕ್ಕೆ ಬಂದಾಗ ಅಲ್ಲಿ ನಿಮಗೆ ಪುರಾತನ ಆದಿನಾಥ ದಿಗಂಬರ ಜೈನ ಬಸದಿಯ ದರ್ಶನ ಮಾಡಲಿದ್ದೀರಿ.

10ನೇ ಶತಮಾನಕ್ಕೆ ಸೇರಿದ ಈ ಜಿನಾಲಯದ ಮೂಲ ಮೂರ್ತಿ ಪಚ್ಚೇ ಆದಿನಾಥ ಸ್ವಾಮಿಯನ್ನು ಕಂಡಾಗಲೇ ಮೂರ್ತಿಯ ಪ್ರಾಚೀನತೆ ಅರಿವಾಗುತ್ತದೆ. ಮೂರ್ತಿಯು ಚಿಕ್ಕದಾಗಿದ್ದರೂ ಕೂಡ ಬಹಳ ಆಕರ್ಷಣೆಯಾಗಿದೆ. ತೀರ್ಥಂಕರರ ಬಾಹುಬಲಿ ಭಗವಂತನ ಹಾಗೂ ಚಕ್ರೇಶ್ವರಿ ಅಮ್ಮನವರ ಜ್ವಾಲಾಮಾಲಿನಿ ದೇವಿ ಮತ್ತು ಪದ್ಮಾವತಿ ದೇವಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ಮಠ ಹಾಗೂ ಆದಿನಾಥ ಜಿನಾಲಯದ ದರ್ಶನ ಪಡೆದು ಸುಮಾರು 2 ಕಿಲೋಮೀಟರ್ ಸಾಗಿದರೆ ಸಿಗುವುದೇ ವೃಷಭಾಂಚಲ ಇಲ್ಲಿನ ವಿಶಾಲವಾದ ಪ್ರಾಂಗಣದಲ್ಲಿ 31 ಅಡಿ ಎತ್ತರದ ವೃಷಭನಾಥ ವಿಗ್ರಹವಿದ್ದು ವಿಗ್ರಹದ ಸುತ್ತ 24 ತೀರ್ಥಂಕರರ ಚರಣಪಾದುಕೆಗಳು ಇರುವ ಮಂಟಪಗಳನ್ನು ನಿರ್ಮಿಸಲಾಗಿದೆ.

ಅದೇ ರೀತಿ 24 ತೀರ್ಥಂಕರರ ಬಸದಿ ಕೂಡ ಇದ್ದು ಕಪ್ಪು ಶಿಲೆಯ ಮೂರ್ತಿಗಳ ದರ್ಶನ ನಿಮಗಾಗುತ್ತದೆ. ಇತ್ತೀಚೆಗೆ ಮುನುಸೂರತ ತೀರ್ಥಂಕರರ ಮುದ್ದಾದ ಪ್ರತಿಮೆಯನ್ನು ಹಾಗೂ ನೂತನ ಜಿನಾಲಯದ ನಿರ್ಮಾಣ ಕೂಡ ಮಾಡಲಾಗುತ್ತಿದ್ದು ಮುಂದಿನ ಜನವರಿ ತಿಂಗಳಲ್ಲಿ ಪಂಚಕಲ್ಯಾಣ ನಡೆಯಲಿದೆ.