ವರೂರು ಬಳಿಯ ಶ್ರೀ ನವಗ್ರಹ ತೀರ್ಥದಲ್ಲಿ ದಿನಾಂಕ 17/07/2024 ರಂದು ನವಗ್ರಹ ತೀರ್ಥ ಹಾಗೂ ನವ ತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ 2025 ಹಾಗೂ ನವನಿರ್ಮಿತ ಸುಮೇರು ಪರ್ವತ ಲೋಕಾರ್ಪಣೆ ಜಿನಬಿಂಬ ಪಂಚಕಲ್ಯಾಣದ ಪ್ರತಿಷ್ಠಾಮಹೋತ್ಸವದ ಪೂರ್ವಭಾವಿ ಸಭೆ ಮತ್ತು ಸಮಸ್ತ ಸ್ವಸ್ತಿಶ್ರೀ ಭಟ್ಟಾರಕರ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಯೋಜನಾ ಹಾಗೂ ಸಾಂಕಿಕ ಖಾತೆ ಸಚಿವ ಡಿ. ಸುಧಾಕರ್ ರವರು ಉದ್ಘಾಟಿಸಿದರು. ನವಗ್ರಹ ತೀರ್ಥದ ನವತೀರ್ಥಂಕರರ ಮಹಾಮಸ್ತಕಾಭಿಷೇಕವನ್ನು 2025 ರ ಜನವರಿ ತಿಂಗಳಲ್ಲಿ ಅಮೋಘವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ತಿಳಿಸದರು. ಈ ಬೃಹತ್ ಕಾರ್ಯಕ್ರಮದಲ್ಲಿ ವಿವಿಧ 120ಕ್ಕೂ ಹೆಚ್ಚು ದೇಶಗಳಿಂದ ಭಕ್ತರು ಆಗಮಿಸಲಿದ್ದು ಈ ಕಾರ್ಯಕ್ರಮಕ್ಕೆ ಅಮೇರಿಕಾದ ಜಿತೇಂದ್ರ ಜೈನ್ ರವರು ನೇತೃತ್ವ ವಹಿಸಲಿದ್ದು ಮಹಾ ಮಸ್ತಕಾಭಿಷೇಕದ ಅಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರು ಹಾಗೂ ಸಚಿವ ಡಿ. ಸುಧಾಕರ್ ರವರು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 15 ಜನ ಭಟ್ಟಾರಕರುಗಳು ಮಹಾ ಮಸ್ತಕಾಭಿಷೇಕ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಮಹಾಮಸ್ತಕಾಭಿಷೇಕಕ್ಕೆ 27 ದ್ರವ್ಯಗಳಿಂದ ನವಗ್ರಹ ತೀರ್ಥಂಕರರಿಗೆ ಅಭಿಷೇಕ ಮಾಡಲಾಗುವುದು. ವಿಶ್ವಶಾಂತಿಗಾಗಿ ಹೋಮ ಹವನದೊಂದಿಗೆ ಪೂರ್ಣಾಹುತಿ ನಡೆಯಲಿದೆ. ವಿವಿಧ ರಾಜ್ಯಗಳಿಂದ 16 ಯಜಮಾನರ ನಿಯೋಜನೆಯಾಗಿದ್ದು 5500 ದಂಪತಿಗಳಿಂದ ಪೂಜೆ ನಡೆಯಲಿದೆ. 11 ದಿನ ನಡೆಯುವ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಪ್ರಧಾನಿ ಸೇರಿದಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಕೂಡ ಆಹ್ವಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಇನ್ನೂ ಅನೇಕ ಮಾಹಿತಿಗಳನ್ನು ತಿಳಿಸಿದ ಅವರು ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ್ದರು. ವರೂರು ಜೈನ ಮಠದ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಗಳು ಕಾರ್ಯಕ್ರಮದ ನೇತೃತ್ವ ಹಾಗೂ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅವರನ್ನು ಹಲವಾರು ಸಂಘ ಸಂಸ್ಥೆಗಳು ಹಾಗೂ ಭಟ್ಟಾರಕರುಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಜೈನ ಮಠದ ಭಟ್ಟಾರಕರುಗಳು , ಶ್ರೀಯುತ ನಿರಂಜನ್ ಜೈನ್ ಕುಮಾರ್ ಹಾಗೂ ಶ್ರೀಮತಿ ಪದ್ಮಲತಾ ನಿರಂಜನ್ ರವರು, ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














