ಕ್ಷೇತ್ರ ಪರಿಚಯ- 27

ಕರ್ನಾಟಕದಲ್ಲಿ ಜೈನ ಧರ್ಮ ಅತ್ಯಂತ ಉನ್ನತ ಮಟ್ಟದಲ್ಲಿ ಬೆಳಗುತ್ತಿದ್ದ ಕಾಲವೊಂದಿತ್ತು. ಕರ್ನಾಟಕವನ್ನು ಜೈನ ಧರ್ಮದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಇಂತಹ ಒಂದು ಭಾಗದಲ್ಲಿ ಜೈನ ಧರ್ಮದ  ಮುಖ್ಯ ಕೇಂದ್ರವಾಗಿದ್ದಂತಹ  ಶ್ರೀ ಕ್ಷೇತ್ರ ಅನೇಕ ಜೈನ ಕವಿಗಳು ಹುಟ್ಟಿ ಬೆಳೆದ ಕ್ಷೇತ್ರ ಅಭಿನವ ಪಂಪ ಎಂಬ ಬಿರುದನ್ನು ಹೊಂದಿದ ನಾಗಚಂದ್ರರು  ಮಲ್ಲಿನಾಥಪುರಾಣವನ್ನು ಬರೆದಂತಹ ಕ್ಷೇತ್ರ . 1500 ವರ್ಷಗಳ ಪುರಾತನವಾದಂತಹ  ಬಿಜಾಪುರದ ಸಹಸ್ರಪಣಿ ಪಾರ್ಶ್ವನಾಥ ಸ್ವಾಮಿ ಬಸದಿ ನೋಡಲು  ಸುಂದರ ಮತ್ತು ಅತಿಶಯಕಾರಿ ಮೂರ್ತಿಯನ್ನು ಒಮ್ಮೆ ದರ್ಶನ ಮಾಡಿ ಬನ್ನಿ. ಶ್ರೀ ಮಹಾವೀರ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ಸವದ ಅಂಗವಾಗಿ ಇಂದು ಬಿಜಾಪುರದ ಸಹಸ್ರಪಣಿ ಪಾಶ್ವನಾಥ ರ ಮಹಾವೀರ ಭಗವಂತ ರ ಬಸದಿಗಳು ಹಾಗೂ ಅದರ ಇತಿಹಾಸವನ್ನು ನಿಮಗಾಗಿ ಖ್ಯಾತ ಗಾಯಕಿ ಪೂಜ್ಯ ಮೋಹನ್ ರವರ ನವೀನ ಗೀತೆಯೊಂದಿಗೆ, ರೇವತಿ ಪದ್ಮರಾಜ್ ರವರ ಸಾಹಿತ್ಯದಲ್ಲಿ ಮೂಡಿಬಂದಿರುವ ಅಮೋಘ ಸಂಕಲನದೊಂದಿಗೆ ನಿಮಗಾಗಿ ಬಿಡುಗಡೆಗೊಳಿಸಿದ್ದೇವೆ ವೀಕ್ಷಿಸಿ ಪುಣ್ಯ ಭಾಗಿಗಳಾಗಿ.

ಈ ಮೂರ್ತಿ 1500 ವರ್ಷಗಳ ಹಿಂದಿನ ಪುರಾತನ  ಪ್ರತಿಮೆಯೆಂದು ಹೇಳಲಾಗುತ್ತದೆ. ಸುಮಾರು 150 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಒಬ್ಬ ಜೈನ ಶ್ರಾವಕನಿಗೆ ಆಗಾಗ ಕನಸಿನಲ್ಲಿ ಈ ಮೂರ್ತಿ  ಗೋಚರವಾಗುತ್ತಿತ್ತೆಂದು  ನಂತರ ಇಲ್ಲಿನ ಸ್ಥಳ ಪರಿಶೀಲನೆ  ಮಾಡಲಾಗಿ ಗುಹಾಂತರ ದೇವಾಲಯವೊಂದು ಪತ್ತೆಯಾಗಿ  ಅಲ್ಲಿ ಸಿಕ್ಕಂತಹ  ಬೂದಿಯಲ್ಲಿ ಮುಚ್ಚಿಟ್ಟ ಮೂರ್ತಿಯನ್ನು ಮೇಲೆ ತಂದು ಇಲ್ಲಿ ಸಣ್ಣದಾದ ಒಂದು ಜಿನಮಂದಿರವನ್ನು ಕಟ್ಟಿ ಸ್ಥಾಪನೆ ಮಾಡಲಾಗುತ್ತದೆ.  ಕಾಲ ಕ್ರಮೇಣ 1991 ರಲ್ಲಿ ಶ್ರವಣಬೆಳಗೊಳದ  ಪೂಜ್ಯಶ್ರೀಗಳಾದ ಶ್ರೇ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು  ಇಲ್ಲಿಗೆ ಆಗಮಿಸಿದಾಗ  ಈ ಸುಂದರ ಮೂರ್ತಿಯನ್ನು ಕಂಡು ಅವರ ಕೃಪೆಯಿಂದ ಹಾಗೂ ಮಾರ್ಗದರ್ಶನದಿಂದ  ಈ ಭವ್ಯವಾದ ದೇವಾಲಯ ನಿರ್ಮಾಣವಾಯಿತು. 1997ರಲ್ಲಿ ಮೂರ್ತಿಯ ಮರುಪ್ರತಿಷ್ಠಾಪನೆ ಯಾಗುತ್ತದೆ. ದೇಶದ  ನಾನಾ ಮಂದಿಗಳು ಸಹಕಾರ ಕೊಟ್ಟು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುವುದಕ್ಕೆ  ಕಾರಣೀಭೂತರಾಗಿರುತ್ತಾರೆ.  ಇಲ್ಲಿ ಮೊದಲೇ ತಿಳಿಸಿದಂತೆ  ಭಗವಾನ್ 1008 ಸಹಸ್ರಫಣಿ ಶ್ರೀ ಪಾರ್ಶ್ವನಾಥ  ತೀರ್ಥಂಕರರು ಮೂಲ ಮೂರ್ತಿಯಾಗಿರುವುದು ಪದ್ಮಾಸನ ಭಂಗಿಯಲ್ಲಿದೆ. ಎಡಬಲ ಭಾಗದಲ್ಲಿ ಶ್ರೀ ಧರಣೇಂದ್ರ ಪದ್ಮಾವತಿ ಯಕ್ಷ ಯಕ್ಷಿಣಿಯರು ಪೂಜಿಸಲ್ಪಡುತ್ತಾರೆ.

ಇಲ್ಲಿನ ಆವರಣದಲ್ಲಿರುವ  ಮತ್ತೊಂದು ಸುಂದರ ಸ್ಥಳ ಸಮವಸರಣ ಮಂದಿರ . ಇಲ್ಲಿ ಗುರುಭವನ ಹಾಗೂ ಬರುವ ಯಾತ್ರಾರ್ಥಿಗಳಿಗಾಗಿ  ವಸತಿ ಗೃಹ ಕೂಡ ಇದೆ. ಉತ್ತರ ಭಾರತದ ಅನೇಕ ಯಾತ್ರಾರ್ಥಿಗಳು ದಕ್ಷಿಣ ಭಾರತಕ್ಕೆ ಹೋಗಬೇಕಾದರೆ ಅಥವಾ ಶ್ರವಣಬೆಳಗೊಳಕ್ಕೆ ಹೋಗಬೇಕಾದರೆ, ಕರ್ನಾಟಕದ ಹೆಬ್ಬಾಗಿಲು ಆಗಿರುವ ಬಿಜಾಪುರಕ್ಕೆ ಭೇಟಿ ನೀಡಿ  ಈ ಬಸದಿಯ ದರ್ಶನ ಮಾಡಿ ಇಲ್ಲಿ ತಂಗಿ  ಹೋಗುತ್ತಾರೆ, ನಂತರದ ದಿನಗಳಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ  ಮತ್ತೊಂದು ಜಿನಮಂದಿರವಿದ್ದು ಕೆಂಪು ಕಲ್ಲಿನಿಂದ ನಿರ್ಮಾಣಗೊಂಡ ಬೃಹತ್ ಮಂದಿರವಾಗಿದೆ. ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಪಂಚ ಕಲ್ಯಾಣ  ಪ್ರತಿಷ್ಠಾ ಮಹೋತ್ಸವ ನಡೆದಂತಹ ಈ ಮಂದಿರ ಭಗವಾನ್ ಮಹಾವೀರರ ಮಂದಿರವಾಗಿದೆ. ಈ ಮೂರ್ತಿ ಕೂಡ 15 ನೆಯ ಶತಮಾನಕ್ಕೆ ಸೇರಿದ್ದಾಗಿದೆಯೆಂದು ಹತ್ತಿರದ ಬಾವಿಯಲ್ಲಿ ದೊರೆತಂತಹ ಮೂರ್ತಿಯಾಗಿದೆಯೆಂದು ಹೇಳುತ್ತಾರೆ.