ಕ್ಷೇತ್ರ ಪರಿಚಯ- 19

-: ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್ :

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿದರೂರು ಗ್ರಾಮದ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯ ಕ್ಷೇತ್ರ ಪರಿಚಯದೊಂದಿಗೆ, ಬಸದಿಯ ಜೀರ್ಣೋದ್ಧಾರ ಕಾರ್ಯದ ಸಂಕ್ಷಿಪ್ತ ಪರಿಚಯ

ಇಂದಿನ ನಮ್ಮ ಪಯಣ ಬಿದರೂರಿಗೆ. ಮಲೆನಾಡಿನ  ಶರಾವತಿ ನದಿ ತಟದಲ್ಲಿ  ತಳಗಳಲೆ  ಜಲಾಶಯದ ಸಮೀಪದಲ್ಲಿ  ಮರಬಿಡೆ ಸೀಮೆಯಲ್ಲಿ ವೇಣಿಪುರ ಎಂದು ಪ್ರಸಿದ್ದಿ ಪಡೆದ ಧರ್ಮಕ್ಕಾಗಿ  ಮುಡಿಪಾಗಿರುವ ಧರ್ಮ ಸೇವಕರ  ಬಿದರೂರಿನ ಕಥೆ ನಿಮ್ಮ ಮುಂದೆ ತರುತ್ತಿದ್ದೇವೆ. ಇಲ್ಲಿ ಅತ್ಯಂತ ಪ್ರಾಚೀನವಾದ  ಭಗವಾನ್ 1008 ಶ್ರೀ ವರ್ಧಮಾನ ಬಸದಿ  ಇದೆ. ತಾಮ್ರ ಶಾಸನದಲ್ಲಿ  ಈ ಬಸದಿಯು ಸಾವಿರಾರು ವರ್ಷ ಗಳ ಹಿಂದಿನದಾಗಿದ್ದು ಹಾಡುವಳ್ಳಿಯ ರಾಜ ಸಂಗೀರಾಯ ಒಡೆಯರ್ ರವರ ಮಗ  ಇತಗರಸ  1200ನೇ ಇಸವಿಯಲ್ಲಿ ಜೀರ್ಣೋದ್ದಾರ ಮಾಡಿಸಿ  ತನ್ನ ತಾಯಿಯ ಸ್ಮರಣಾರ್ಥ  ಬಸದಿಯ ತ್ರಿಕಾಲ ಪೂಜೆಗಾಗಿ  ಇಡೀ ಊರನ್ನೇ ದತ್ತು ಬಿಟ್ಟಿರುವುದು  ತಿಳಿದು ಬರುತ್ತದೆ. 1700ನೇ ಇಸವಿಯಲ್ಲಿ  ಕೆಳದಿಯ ಸಂಸ್ಥಾನದ  ರಾಜರ ಸಾಮಂತರ ರಾಮನಾಯಕ  ಎನ್ನುವವ ಮತ್ತೆ ಜೀರ್ಣೋದ್ದಾರ ಮಾಡಿದ್ದು ಅನೇಕ ಜಿನಬಿಂಬಗಳನ್ನು ಬಸದಿಗೆ ನೀಡಿರುತ್ತಾರೆ. ಇಲ್ಲಿ ಶ್ರೀ ಆದಿನಾಥ ಸ್ವಾಮಿ ಹಾಗೂ  ಶ್ರೀ ಮಹಾವೀರ ಸ್ವಾಮಿಯ 202 ಬಸದಿಗಳು ಇದ್ದವೆಂದು ತಿಳಿದುಬರುತ್ತವೆ. ಹಾಗಾಗಿ ಈ ಬಸದಿಯು ಸಾವಿರಾರು ವರ್ಷಗಳ  ಪ್ರಾಚೀನತೆಯನ್ನು ಪಡೆದಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.  ಈ ಬಸದಿಯ ಮೂಲ ನಾಯಕ . ಭಗವಾನ್ ವರ್ಧಮಾನ ಸ್ವಾಮಿಯು ಕೃಷ್ಣ ಶಿಲೆಯದ್ದಾಗಿದ್ದು 24 ತೀರ್ಥಂಕರುಗಳನ್ನು ಒಳಗೊಂಡ ಪ್ರಭಾವಿಯಲ್ಲಿ ಯಕ್ಷ ಯಕ್ಷಿಯರ ಸಾನಿಧ್ಯ ಇದ್ದು ಅತ್ಯಂತ ಸುಂದರವಾಗಿರುತ್ತದೆ. ಇತಿಹಾಸ ತಜ್ನರ ಪ್ರಕಾರ  ಈ ವಿಗ್ರಹವು ಆದಿ ಕದಂಬರರ ಕಾಲದ್ದಾಗಿರಬಹುದಾಗಿದೆ. ಈ ಬಸದಿಯಲ್ಲಿ ನಿತ್ಯ ಉತ್ಸವಗಳು ನಡೆಯುವ ಬಗ್ಗೆ ಮರದಿಂದ ನಿರ್ಮಿತವಾದ  ಪುರಾತನವಾದ ಸುಂದರವಾದ ಪಲ್ಲಕ್ಕಿ , ಅಲಂಕಾರಿಕ ಬೆಳ್ಳಿ ವಸ್ತುಗಳು  ಮತ್ತು ಮರದಿಂದ ನಿರ್ಮಾಣವಾದ  ಗುರುಪೀಠ ಹಾಗೂ ಪುರಾತನ ಗುರುಗಳ ಪಾದುಕೆ ಹಾಗೂ ಪುರಾತನ ವಿವಿಧ ರೀತಿಯ ಓಲೆಗರಿ ಗ್ರಂಥಗಳು ಸಂರಕ್ಷಿಸಲ್ಪಟ್ಟಿದ್ದು ಸದಾ ಹಚ್ಚ ಹಸುರಿನಿಂದ  ಶೋಭಿಸುತ್ತಿರುವ ವೇಣುಪುರವು ಶ್ರೀ ಸ್ವಾದಿ ದಿಗಂಬರ ಜೈನ ಮಠದ ಚರುರ್ಪೀಠಗಳಲ್ಲಿ ಒಂದು ಎಂಬುದರ ಕುರುಹಾಗಿದೆ.

ಈ ಕ್ಷೇತ್ರಕ್ಕೆ ಅನೇಕ ಆಚಾರ್ಯರು . ಮುನಿಗಳು  ತಮ್ಮ ಸಂಘದೊಡನೆ ಆಗಮಿಸಿ  ವಿವಿಧ  ಆರಾಧನೆ ,ಪೂಜೆಗಳನ್ನು  ನಡೆಸಿರುತ್ತಾರೆ. ಮತ್ತು ನಾಡಿನ ‘ಅನೇಕ ಭಟ್ಟಾರಕರು ವಿದ್ವಾಂಸರು ಸಹ ಈ ಕ್ಷೇತ್ರ ದರ್ಶನ ಮಾಡಿರುತ್ತಾರೆ. ಪ್ರತಿವರ್ಷವೂ ಸಹ ವಿಶೇಷವಾಗಿ ಯುಗಾದಿ, ಮಹಾವೀರ ಜಯಂತ್ಯುತ್ಸವ , ಶ್ರಾವಣ ಉಪಕರ್ಮ, ದಶಲಕ್ಷಣ ಪರ್ವ, ನೋಂಪಿ, ನವರಾತ್ರಿ ಉತ್ಸವ ಮಹಾವೀರ  ನಿರ್ಮಾಣ ಕಲ್ಯಾಣೋತ್ಸವ ಜಿನರಾತ್ರಿ ವಿಶೇಷ ಪೂಜೆ  ಕಾರ್ತಿಕ ದೀಪೋತ್ಸವ  ಮುಂತಾದ ಧಾರ್ಮಿಕ ಉತ್ಸವಗಳು ನಡೆದುಕೊಂಡು ಬರುತ್ತಿವೆ  ಸೀಮೆಯ ಸಾವಿರಾರು ಭಕ್ತರು ಪೂಜ್ಯ ಸ್ವಸ್ಥಿ ಶ್ರೀ ಭಟ್ಟಾಕಲಂಕ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ  ಅತಿ ವಿಜೃಂಭಣೆಯಲ್ಲಿ ನಡೆಸುತ್ತಾ ಬಂದಿರುತ್ತಾರೆ.  ಈ ಬಸದಿಯು ಕಾಲಕಾಲಕ್ಕೆ ಜೀರ್ಣೋದ್ದಾರಗೊಳ್ಳುತ್ತಾ ಬಂದಿದ್ದು ಮಲೆನಾಡಿನ ಅತಿ ಮಳೆಯ ಕಾರಣ ಈಗ ಸಂಪೂರ್ಣ ಶಿಥಿಲಾವಸ್ಥೆಯನ್ನು ಹೊಂದಿರುವುದರಿಂದ  ಈ ಜಿನಮಂದಿರವನ್ನು ಪರಮಪೂಜ್ಯ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚರ್ಯ ಮಹಾಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ  ಹಾಗೂ ಪರಮಪೂಜ್ಯ ಸ್ವಸ್ಥಿಶ್ರೀ ಪೂಜ್ಯ  ಭಟ್ಟಾಕಲಂಕ ಭಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರ ಸ್ವಾತಿ ದಿಗಂಬರ ಜೈನ ಮಠ ಸುಂಡ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಊರ ಪರ ಊರ ದಾನಿಗಳ ನೆರವಿನಿಂದ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಲು ತೀರ್ಮಾನಿಸಿ ಕಾಮಗಾರಿಯನ್ನು  ಪ್ರಾರಂಭಿಸಲಾಗಿದೆ. ಇಲ್ಲಿನ ಜೈನ ಭಾಂದವರು ಶರಾವತಿ ಕಣಿವೆ ವಿದ್ಯತ್ ಯೋಜನೆಯ ಹಿನ್ನೀರಿನ ಮುಳುಗಡೆಗೊಂಡ ಪ್ರದೇಶದ ಸಂತ್ರಸ್ಥರಾಗಿದ್ದು ಆರ್ಥಿಕ ಮುಗ್ಗಟ್ಟಿನಲ್ಲಿಯೂ ಕೂಡ  ತಮ್ಮ ಊರಿನ ಶಿಥಿಲವಾದ ಬಸದಿಯ ಮರು ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದರೆ ಅತಿ ಮಳೆಯ ಕಾರಣ ತಳಹದಿಗಾಗಿ ತೆರೆಯಲಾದ ಪಾಯಗಳಲ್ಲಿ ಮಣ್ಣು ತುಂಬಿದಂತೆಲ್ಲಾ ಮತ್ತೇ ಮತ್ತೆ ಊರಿನ ಶ್ರಾವಕರೇ ಸೇರಿ ಮಣ್ಣನ್ನು ಹೊರ ತೆಗೆಯುತ್ತಿರುವುದು  ಹಾಗೂ ಇಲ್ಲಿನ ತಳಹದಿಗಾಗಿ  ಕಲ್ಲನ್ನು ಕೂಡ ಶ್ರಾವಕರೇ  ತುಂಬಿ ಭರ್ತಿ ಮಾಡುತ್ತಿರುವುದು  ಎಲ್ಲವನ್ನೂ ತಾವುಗಳೇ ನಿಂತು ಮಾಡಿರುತ್ತಾರೆ.  ಅದಕ್ಕಾಗೇ ಮೊದಲು ಹೇಳಿದ್ದು ಧರ್ಮಸೇವಕರ ನಾಡಿನ ಕಥೆಯಿದು ಎಂದು ಹೇಳಿದ್ದು.

ಅತ್ಯಂತ ಪುರಾತನವೂ ಪವಿತ್ರವೂ ಆದ ಈ ಬಸದಿಯ ಜೀರ್ಣೋದ್ಧಾರ ಮಾಡಿಸುವ ಸಲುವಾಗಿ ಅನೇಕ ವಾಸ್ತು ವಿದ್ವಾಂಸರು  ಶಿಲ್ಪಿಗಳನ್ನು ಗುರುಗಳು ಸಂಪರ್ಕಿಸಿ ಪರಮಪೂಜ್ಯ ಸ್ವಸ್ಥಿಶ್ರೀ ಪೂಜ್ಯ  ಭಟ್ಟಾಕಲಂಕ ಭಟ್ಟಾಚಾರ್ಯವರ್ಯ  ಮಹಾಸ್ವಾಮಿಗಳವರ ಆದೇಶದಂತೆ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸುವ ನೀಲಿನಕ್ಷೆ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ಸಿದ್ದಪಡಿಸಲಾಗಿದೆ. ಆದುದರಿಂದ  ಊರ ಮತ್ತು ಪರ ಊರ ಧರ್ಮ ಬಂಧುಗಳು ಬಸದಿ ನಿರ್ಮಾಣಕ್ಕೆ  ವಿಶೇಷ ಸಹಾಯವನ್ನು ನೀಡಿ ಪುಣ್ಯಭಾಗಿಗಳಾಗಬೇಕೇಂದು ಈ ಮೂಲಕ ಸಮಿತಿಯ ಸದಸ್ಯರುಗಳು ವಿನಂತಿಸಿಕೊಳ್ಳುತ್ತಿದ್ದಾರೆ.