ಕರೋನಾ ಹಾಸನ ವಿತರಣೆ/
ಜಿಲ್ಲಾ ಕೇಂದ್ರದಲ್ಲಿರುವ ಸರ್ವೇ ಸಾಮಾನ್ಯ ಜೈನ ಸಂಘಟನೆಯಾದರೂ ಮಾಡಿದ ಕಾರ್ಯ ಅಸಮಾನ್ಯವಾದುದು. ಜೀವದಯ ಧರ್ಮದ ಸಂಕಲ್ಪಯುತ ಅನುಷ್ಠಾನ ಸಮುದಾಯಕ್ಕೆ ತಂದ ಕೀರ್ತಿ ಅಮೋಘವಾದುದು. ಸರ್ವರೂ ಆಲಿಸಲೇಬೇಕಾದ ಮಹತ್ಕಾರ್ಯದ ಉದ್ದೇಶ ಸಫಲವಾದ ಕಥನ. ಬಹುಶಃ ಇಷ್ಟೆಲ್ಲಾ ಸಾಧ್ಯವಾದದ್ದು ಹಾಸನ ಜೈನ ಸಮಾಜದವರಿಗಿದ್ದ ಶ್ರವಣಬೆಳಗೊಳದ ಶ್ರೀ ಕ್ಷೇತ್ರದ ಚಾರುಶ್ರೀಗಳ ಮೇಲಿನ ಅಪಾರ ಅಭಿಮಾನ. ಧರ್ಮ ಬಂಧುಗಳೇ ತಮಗೆಲ್ಲಾ ತಿಳಿದಿರುವಂತೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸವಿನೆನಪಿನಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಹಾಸನ ಜೈನ್ ಸಮಾಜದ ವತಿಯಿಂದ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಹಾಸನ ಜೈನ ಸಂಘದ ನೇತೃತ್ವದಲ್ಲಿ ಸಭೆ ನಡೆಸಿ ಸಭೆಯ ನಡಾವಳಿಯಂತೆ ಪ್ರತಿದಿನ ಆಹಾರ ತಯಾರಿಸಿ ಆಹಾರದ ಪೊಟ್ಟಣಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು . ಅದರಂತೆ ಸಮಾಜದ ಅನೇಕರು ಯುವಕರು ಹೆಚ್ಚಿನ ಜವಾಬ್ಚಾರಿಯನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸಲು ಪ್ರಾರಂಭಿಸಿ ಏಪ್ರಿಲ್ 22 ರಿಂದ ಮೇ 3 ರವರೆಗೆ ಪ್ರತಿದಿನ ಶುದ್ದ ಹಾಗೂ ರುಚಿಕರವಾದ ಆಹಾರವನ್ನು ತಯಾರಿಸಿ ತರಿಸಿರುತ್ತಾರೆ. ಹಾಸನ ಜೈನ ಸಂಘದ ಅಧ್ಯಕ್ಷರಾದ ಶ್ರೀ ಎಮ್. ಅಜಿತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಭೆಯ ನಡಾವಳಿಯಂತೆ ಅದರ ಜವಾಬ್ಚಾರಿಯನ್ನು ಶ್ರೀ ಹಚ್. ಡಿ ಜಲೇಂದ್ರ ಕುಮಾರ್ ಶ್ರೀ ಹೆಚ್. ಎನ್ ಹರ್ಷ , ಶ್ರೀ ಹೆಚ್. ಎನ್ ಸುಕುಮಾರ್ ರವರು ಒಳಗೊಂಡಂತೆ ಉಪಸಮಿತಿಯನ್ನು ರಚಿಸಲಾಯಿತು. ಪ್ರತಿದಿನ ಶುದ್ದ ಹಾಗೂ ಗುಣಮಟ್ಟದ ಆಹಾರವನ್ನು ತಯಾರಿಸಿ ಕಾರ್ಯಕರ್ತರು ಪೊಟ್ಟಣಗಳಲ್ಲಿ ಅದನ್ನು ತುಂಬಿ ನಂತರ ಅದನ್ನು ವಾಹನಗಳಲ್ಲಿ ತುಂಬಿ ಕೊಂಡು ಹೋಗಿ ನಗರದೆಲ್ಲೆಡೆ ಸಂಚರಿಸಿ ನಿರ್ಗತಿಕರಿಗೆ ಕೂಲಿ
ಕಾರ್ಮಿಕರಿಗೆ ದಿನ ಬೆಳಗ್ಗೆ ಸಾಮಾಗ್ರಿಗಳನ್ನು ಸಾಗಿಸುವ ಲಾರಿ ಚಾಲಕರಿಗೆ ಆಶಾ ಕಾರ್ಯಕರ್ತರಿಗೆ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರತ ಆರಕ್ಷ ಸಿಬ್ಬಂದಿ ಗೃಹರಕ್ಷಕ ಸಿಬ್ಬಂದಿ ಸ್ವಯಂ ಸೇವಕರು , ವೈದ್ಯಕೀಯ ಸೇವಾ ಸಿಬ್ಬಂದಿ ಹಾಗೂ ಆಹಾರದ ಅವಶ್ಯಕತೆಯಿರುವ ಎಲ್ಲರಿಗೂ ತಲುಪಿಸಿದರು . ಆಹಾರದ ಜೊತೆಯಲ್ಲಿ ಕುಡಿಯುವ ನೀರಿನ ಬಾಟಲ್ , ಮಜ್ಜಿಗೆಯನ್ನು ವಿತರಿಸಲಾಯಿತು.ಆಹಾರ ವಿತರಣೆ ಕಾರ್ಯಕ್ರಮಕ್ಕೆ ಹಾಸನದ ಪೋಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸ್ ಗೌಡರವರು ಆಗಮಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಹಾರವನ್ನು ಸೇವಿಸಿದ ಅವರು ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪ್ರಶಂಸೆ ವ್ಯಕ್ತ ಪಡಿಸುತ್ತಾ ಹಾಸನದ ಜೈನ ಸಮಾಜವು ಕೈಗೊಂಡಿರುವ ಸಮಾಜಮುಖಿ ಕಾರ್ಯವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಆಹಾರ ವಿತರಣೆ ಕಾರ್ಯಕ್ಕೆ ಚಾಲನೆ ಮೊದಲು ಬಸದಿಯ ದರ್ಶನ ಪಡೆದ ವರಿಷ್ಠಾಧಿಕಾರಿಗಳು ಕೂಡಲೇ ಈ ಮಹಾಮಾರಿ ರೋಗವು ಇಡೀ ವಿಶ್ವವನ್ನೇ ಬಿಟ್ಟು ತೊಲಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಹಾಸನ ಜೈನ ಸಂಘದ ಅಧ್ಯಕ್ಷರಾದ ಶ್ರೀ ಎಮ್ . ಅಜಿತ್ ಕುಮಾರ್ ರವರು ಮಾತನಾಡುತ್ತಾ ಈ ಸಂಕಷ್ಟದಲ್ಲಿ ಏನಾದರೂ ಸಹಾಯ ಮಾಡುವ ನಿಟ್ಟಿನಲ್ಲಿ ಆಹಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಪ್ರತಿದಿನ ಆಹಾರ ವಿತರಿಸಲು ಸಿದ್ದತೆ ಮಾಡಿಕೊಂಡಿರುತ್ತೇವೆ. ನಂತರವೂ ಲಾಕ್ ಡೌನ್ ಮುಂದುವರೆದರೆ ಆಹಾರ ವಿತರಣೆ ಕಾರ್ಯವನ್ನು ಮುಂದುವರೆಸುತ್ತೇವೆ. ಆದರೆ ಅದಕ್ಕೂ ಮೊದಲೇ ಈ ಮಹಾಮಾರಿ ರೋಗವು ತೊಲಗಿ ಜನರಿಗೆ ಈ ರೋಗದಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ಆಹಾರ ವಿತರಣೆಯ ದಿನ ಜೈನಭವನಕ್ಕೆ ಆಗಮಿಸಿದ ಹಾಸನದ ಶಾಸಕರಾದ ಪ್ರೀತಂ ಜೆ ಗೌಡರವರು ಇಂದು ವಿಶ್ವಾದ್ಯಂತ ಕರೋನಾ ಮಹಾಮಾರಿಯು ವಕ್ಕರಿಸಿದ್ದು ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಎತ್ತಿಹಿಡಿವಂತೆ ಮಾಡಿದೆ. ತಾನಷ್ಟೇ ಸುಖವಾಗಿರಬೇಕೆಂದು ಬಯಸಿದವರು ಇಂದು ತಮ್ಮ ನೆರೆಹೊರೆಯವರು ಸಮಾಜ, ಜಿಲ್ಲೆ, ರಾಜ್ಯ ರಾಷ್ಟ್ರಿಇಡೀ ವಿಶ್ವವೇ ಸುಖವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.
ಬದುಕು ಬದುಕಲು ಬಿಡು ಎಂಬ ಜೈನ ಧರ್ಮದ ತತ್ವವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಜೈನ ಸಮಾಜವು ಈ ವಿಪತ್ತಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ವಿತಣೆಯನ್ನು ಮಾಡುತ್ತಿದ್ದು ನಿಜಕ್ಕೂ ಇದು ಉತ್ತಮವಾದ ಕಾರ್ಯವಾಗಿದೆ. ಕಾರ್ಯಕ್ಕೆ ಸರ್ವ ಕೈಜೋಡಿಸಬೇಕೆಂದು ತಿಳಿಸುತ್ತಾ 50000 ರೂಗಳ ದೇಣಿಗೆಯನ್ನು ಶ್ರೀ ಹಾಸನ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರವರಿಗೆ ನೀಡಿ ಕಾರ್ಯವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಗೋಪಾಲಸ್ವಾಮಿಯವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹೆಚ್. ಕೆ ಜವರೇಗೌಡರವರು ಆಗಮಿಸಿ ಆಹಾರ ತಯಾರಿಕೆಗೆ ಪ್ಯಾಕಿಂಗ್ ವಿತರಣೆಯ ಕಾರ್ಯವನ್ನು ನೋಡಿ ಇಷ್ಟು ಶುದ್ದ ಹಾಗು ಉತ್ತಮ ಗುಣಮಟ್ಟದಲ್ಲಿ ಆಹಾರ ತಯಾರಿಸುತ್ತಿರುವುದನ್ನು ಶ್ಲಾಘಿಸಿದರು. ಅಲ್ಲದೇ ಜನತಾ ಮಾಧ್ಯಮ ಪತ್ರಿಕೆ ಸಂಪಾದಕರಾದ ಶ್ರೀ ಆರ್. ಪಿ ವೆಂಕಟೇಶಮೂರ್ತಿ , ಮಂಜುನಾಥ ದತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ವಿಭಾಗದ ಅಧ್ಯಕ್ಷರಾದ ಹಾಸನ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಹಾಗು ನಗರದ ಇತರ ಗಣ್ಯರು ಆಗಮಿಸಿ ಜೈನ ಸಮಾಜದ ಕಾರ್ಯವನ್ನು ಪ್ರಶಂಸಿಸಿದರು. ನೂರಾರು ಟ್ಯಾಂಕರ್ ವಾಹನಚಾಲಕರು ತಮ್ಮ ಆಹಾರ ವಿತರಣೆಯ ವಾಹನವನ್ನು ಕಂಡೊಡನೆ ಆಹಾರಕ್ಕಾಗಿ ಅವರೇ ಓಡಿ ಬಂದು ಸ್ವಯಂ ಸಾಲಿನಲ್ಲಿ ನಿಲ್ಲುತ್ತದ್ದ ದೃಶ್ಯ ನಿಜಕ್ಕೂ ಇವರ ಕಾರ್ಯಕ್ಕೆ ಸಾರ್ಥಕತೆಯನ್ನು ತೋರುತ್ತಿತ್ತು. ಪ್ರತಿದಿನ ವಿಧ ವಿಧವಾದ ಅಂದರೆ ರೈಸ್ ಬಾತ್ . ಪಲಾವ್ ವಾಂಗೀಬಾತ್ , ಗೀರೈಸ್ ಮೆಂತ್ಯೆ ಬಾತ್ ಮೊಸರನ್ನ ಮುಂತಾದ ಆಹಾರವನ್ನು ತಯಾರಿಸಿ ಸುಮಾರು 750 ಎಮ್. ಎಲ್ ಅಲ್ಯುಮಿನಿಯಂನ ಕಂಟೇನರ್ ನಲ್ಲಿ ತುಂಬಿಸಿ ವಿತರಿಸಲಾಗುತ್ತಿತ್ತು. ಈ ಕಾರ್ಯಕ್ಕೆ ಹಾಸನ ಹಾಗೂ ಇತರೇ ಊರಿನ ಜೈನ ಸಮಾಜದ ಬಾಂಧವರಿಂದ ಹೆಚ್ಚಿನ ನೆರವು ಬಂದಿದೆ. ಹೀಗೆ ಸಹಕರಿಸಿದ ಎಲ್ಲಾ ಸಂಘಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತದೆ.













