ಭಗವಾನ್ ಶ್ರೀ 1008 ವಿಮಲನಾಥ ತೀರ್ಥಂಕರರ ಜಿನ ಚೈತ್ಯಾಲಯ, ಬೆಳ್ಳೂರು

ಬೆಳ್ಳೂರಿನ ಶ್ರೀ ವಿಮಲನಾಥ  ಜಿನ ಚೈತ್ಯಾಲಯದಲ್ಲಿ ಪ್ರಥಮ ಹಂತದಲ್ಲಿ ನಡೆಯುತ್ತಿರುವ ಅನಂತ ನೋಂಪಿ ಪಂಚಕಲ್ಯಾಣ  ಮಹೋತ್ಸವ ಹಾಗೂ ಅನಂತ ನೋಂಪಿ ಮಹೋತ್ಸವದ  ದೃಶ್ಯಾವಳಿಗಳು ನಿಮಗಾಗಿ.  ಧರ್ಮನಗರಿ ಬೆಳ್ಳೂರಿನ ಶ್ರೀ 1008 ವಿಮಲನಾಥ ಜಿನಾಲಯದಲ್ಲಿ ಅನಂತನೋಂಪಿ ಉದ್ಯಾಪನಾ ಪಂಚ ಕಲ್ಯಾಣ ಮಹೋತ್ಸವ ಹಾಗೂ ಅನಂತನೋಂಪಿ ಉದ್ಯಾಪನಾ ಕಾರ್ಯಕ್ರಮ ಬಹಳ ವಿಧಿವತ್ತಾಗಿ ನೆರವೇರಿಸಿದರು. ಅಂದಿನ ದಿನ ನೋಂಪಿಗೆ ಭಾಗವಹಿಸುವ ವ್ರತಿಕರಿಗೆ ಫಲಾದಿ ದ್ರವ್ಯಗಳನ್ನು ಸಲ್ಲಿಸುವ ಸಲುವಾಗಿ ಸಮಾಜ ಬಾಂಧವರು ನಿರತರಾಗಿದ್ದು ಕಂಡು ಬಂದಿತು. ದಿನಾಂಕ 8/1/2019 ರಿಂದ 14/1/2019 ರವರೆಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮ ಸ್ವಸ್ಥಿ ಶ್ರೀ ಚಾರಿಕೀರ್ತಿ ಭಟ್ಟಾರಕವರ್ಯ ಮಹಾ ಸ್ವಾಮೀಜಿಯವರು , ಸ್ವಸ್ಥಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರು ಹಾಗೂ  ಶ್ರೀ ಶ್ರೀ ಲಕ್ಷ್ಮೀ ಶ್ರೀ ಭಟ್ಟಾರಕ ಮಹಾ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಪೂಜ್ಯ ಆರಿಕಾ ಶ್ರೀ105 ಸನ್ಯಕ್ ಶ್ರೀ ಮಾತಾಜಿ, ಪೂಜ್ಯಾರಿಕ ಶ್ರೀ 105 ಶ್ರೀ ವಿನಯ್ ಶ್ರೀ ಮಾತಾಜಿಯವರ ನೇತೃತ್ವದಲ್ಲಿ ನಡೆಯಿತು. ಅನಂತ ನೋಂಪಿಯಲ್ಲಿ ಭಾಗವಹಿಸುವ ವ್ರತಿಕರು ಸೇರಿ ಭಗವಾನ್ ಶ್ರೀ  ಅನಂತನಾಥ ಸ್ವಾಮಿಗೆ ಗರ್ಭ ಕಲ್ಯಾಣ ಅಷ್ಟ ದ್ರವ್ಯಾದಿಗಳಿಂದ ಜನ್ಮಾಭಿಷೇಕವನ್ನು ನೆರವೇರಿಸಿ ಜನ್ಮ ಕಲ್ಯಾಣ ದೀಕ್ಷ ಕಲ್ಯಾಣ  ಕೇವಲ ಙ್ನಾನ ಕಲ್ಯಾಣ ಮೋಕ್ಷ ಕಲ್ಯಾಣ ಹೀಗೆ ಲಘು ಪಂಚ ಕಲ್ಯಾಣವನ್ನು ಆಚರಿಸಲಾಯಿತು.

ವೀಕ್ಷಕರೇ ಅನಂತನೋಂಪಿ ವ್ರತಾಚರಣೆಯು ಪ್ರತಿ ವರ್ಷ ಭಾದ್ರಪ್ರದ ಮಾಸದಲ್ಲಿ ಅನಂತ ಚತುರ್ದಶಿಯ  ದಿನದಂದು ತ್ರಯೋದಶಿ, ಚತುರ್ದಶಿ ಪೌರ್ಣಮಿ ಈ ಮೂರು ದಿವಸಗಳಲ್ಲಿ ನೋಂಪಿಯ ವ್ರತವನ್ನು ನೆರವೇರಿಸಲಾಗುತ್ತದೆ. ಆದಿನಾಥರ ಕಾಲದಲ್ಲಿ ಭರತ ಚಕ್ರವರ್ತಿ ಈ ನೋಂಪಿಯನ್ನು ಆಚರಿಸಲಾಗಿತ್ತು ಎನ್ನಲಾಗುತ್ತದೆ. ಹಾಗೂ ಮಹಾವೀರ ಸಂವತ್ಸರದಲ್ಲಿ ಚೇಳಿನಿ ಮತ್ತು ಶ್ರೇಣಿಕರು ಗೌತ್ತಮ ಗಣದರರಿಂದ ತಮ್ಮ ಕಷ್ಟ ನಿವಾರಣೆಗಾಗಿ ನೋಂಪಿಯೊಂದನ್ನು ತಿಳಿದುಕೊಂಡು ಆಚರಿಸಲಾಗಿತ್ತೆನ್ನಲಾಗುತ್ತದೆ.

ಅನಂತನೋಂಪಿಯನ್ನು ಆಚರಿಸಿದರೆ ಈ ಭವದಲ್ಲೂ ಮುಂದಿನಭವದಲ್ಲೂ ಅನಂತಸುಖ ಪ್ರಾಪ್ತಿಯಾಗುತ್ತದೆ ಎಂದು ಗೌತಮ ಗಣಧರರಿಂದ  ತಿಳಿಸಲ್ಪಡುತ್ತದೆ. ಅಂದಿನಿಂದ ಇಂದಿನವರೆಗೂ 14ನೇ ತೀರ್ಥಂಕರರಾದ  ಶ್ರೀ ಅನಂತನಾಥ ಸ್ವಾಮಿಗೆ ಅನಂತನೋಂಪಿಯನ್ನು ಆಚರಿಸುತ್ತಾ ಬಂದಿದ್ದು ಪ್ರಥಮ ತೀರ್ಥಂಕರರಿಂದ 14ನೇ ತೀರ್ಥಂಕರರವರೆಗೆ ಅಷ್ಟಕಗಳನ್ನು ಮಾಡಿ 14ನೇ ತೀರ್ಥಂಕರರಾದ ಅನಂತನಾಥ ಸ್ವಾಮಿಯ ಅಷ್ಟಕ ಬಂದಾಗ 14 ಬಾರಿ ಜಲ, 14 ಗಂಧ, 14 ಅಕ್ಷತಾ, 14 ಪುಷ್ಪ, 14 ಚರು, 14 ದೀಪ, 14 ಧೂಪ, 14 ಫಲ, 14 ಅರ್ಗ್ಯ ಗಳನ್ನು ಮಾಡಿ , 14 ಮಂತ್ರ  ಪುಷ್ಪಗಳನ್ನು ಮಾಡಿ ಜಯಮಾಲೆಯನ್ನು ಮಾಡಿ ಬವಾವಳಯನ್ನು ಉಚ್ಚರಿಸಿ ಸ್ತೋತ್ರಾಗ್ಯವನ್ನು ಕೊಡುವುದು ಅನಂತನೋಂಪಿಯ ಒಂದು ವಿಧಿ ವಿಧಾನ ವಾಗಿದೆ.  ಈ ರೀತಿಯಾಗಿ 14 ವರ್ಷ ಭಕ್ತಿ ಭಾವ ಶ್ರದ್ಧೆ ಅರ್ಥದಿಂದ ನೋಂಪಿಯನ್ನು ಮಾಡಿ 14 ಗಂಟುಗಳುಳ್ಳ ದಾರವನ್ನು ಸಮರ್ಪಿಸುವುದು ಉದ್ಯಾಪನೆಯಲ್ಲಿ . ಈ 14 ಗಂಟುಗಳು ಯಾವುವೆಂದರೆ ಮೊದಲನೆಯದಾಗಿ 14 ತೀರ್ಥಂಕರುಗಳಾದ ಪ್ರಥಮ ತೀರ್ಥಂಕರರಾದ ವೃಷಭನಾಥ ನಿಂದ ಹಿಡಿದು ಅನಂತನಾಥನವರೆಗೆ ಚತುರ್ದಶ ತೀರ್ಥಂಕರರಿಗೆ ನಮೋನ್ನಮಃ . ( 2) ಸಿದ್ದ ಪರಮಿಸ್ಟಿಗಳ 14 ಗುಣಗಳಿಗೆ ನಮೋನ್ನಮಃ , ( 3) ಮಾತಶ್ರುತ ಅವಧಿ ಸಂಪನ್ನರಾದ 14 ಮುನಿಗಳಿಗೆ ನಮೋನ್ನಮಃ  (4) ಅರಿಹಂತರಿಗೆ ಇರುವ 14 ದೇವಕೃತ ಅತಿಶಯಗಳಿಗೆ ನಮೋನ್ನಮಃ , (5) ಉತ್ಪಾದ ಪೂರ್ವಾದಿ  ಚತುರ್ದಶಿಗಳಿಗೆ ನಮೋನ್ನಮಃ ,(6) 14 ಒಣ ಸ್ಥಾನಗಳಿಗೆ ನಮೋನ್ನಮಃ , (7) 14 ಮಾರ್ಗಣ ಸ್ಥಾನಗಳಿಗೆ ನಮೋನ್ನಮಃ ,(8) 14 ಜೀವ ಸಮಾಸಗಳಿಗೆ  ನಮೋನ್ನಮಃ , (9) 14 ನದಿಗಳಿಗೆ ನಮೋನ್ನಮಃ ,(10) 14 ಮನುಗಳಿಗೆ ನಮೋನ್ನಮಃ (11) 14 ಚಕ್ರವರ್ತಿಗಳ 14 ರತ್ನಗಳಿಗೆ ನಮೋನ್ನಮಃ , (12) 14 ಸ್ವರಗಳಿಗೆ ನಮೋನ್ನಮಃ  (13)  14 ತಿಥಿಗಳಿಗೆ ನಮೋನ್ನಮಃ . ಕೊನೆಯದಾಗಿ ಹಾಗೂ 14ನೆಯದಾಗಿ 14 ಪರಿಗ್ರಹಗಳನ್ನು ಗೆದ್ದಂತಹ ಮುನಿಗಳಿಗೆ ನಮೋನ್ನಮಃ ಎಂದು ಅನಂತನೋಂಪಿಯಲ್ಲಿ ತ್ರಯೋದಶಿ ದಿವಸ ಒಂದೊಂದು ಗಂಟನ್ನು ಸ್ಪರ್ಷಿಸಿ ನಮಸ್ಕರಿಸುತ್ತಾರೆ. ಉದ್ಯಾಪನೆಯ ದಿನ 14 ಗಂಟುಗಳಿಗೆ ಪ್ರತಿ ಗಂಟಿಗೆ 14ರಂತೆ 196 ಗಂಟುಗಳಿಗೆ ಅರ್ಘ್ಯವನ್ನು ನೀಡಿ ದಾರವನ್ನು ಸಮರ್ಪಿಸಲಾಗುವುದು. ಹೀಗೆ ಅನಂತನೋಂಪಿ  ಉಧ್ಯಾಪನೆಯಲ್ಲಿ ಅಷ್ಟಕ, ಜಯಮಾಲಾ , ಪೂರ್ಣಾಘ್ಯಗಳನ್ನು ಮಾಡಿ ಆಚರಿಸುತ್ತಾರೆ. ಇಂತಹ ಅನಂತನೋಂಪಿ  ಉದ್ಯಾಪನಾ ಕಾರ್ಯವನ್ನು ಬೆಳ್ಳೂರಿನ ಸಮಾಜ ಬಾಂಧವರೆಲ್ಲ ಸೇರಿ  ವಿಜೃಂಭಣೆಯಿಂದ ಆಚರಿಸಿದರು.