ವಿಶ್ವವಿಖ್ಯಾತ ಶ್ರೀ ಗೊಮ್ಮಟೇಶ್ವರ ಶ್ರೀ ಬಾಹುಬಲಿ ಮೂರ್ತಿಗೆ 2018 ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಮೂರ್ತಿಯ ವೈಙ್ನಾನಿಕ ಸಂರಕ್ಷಣೆ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು.
ಫೆಬ್ರವರಿ 28 ರಿಂದಲೇ ವಿಶೇಷ ಪೂಜೆ ಆರಂಭಗೊಂಡು ಬೃಹಶಾಂತಿದಾರ, 24 ತೀರ್ಥಂಕರರ ಆರಾಧನೆ , ನವಗ್ರಹ ಮಹಾ ಶಾಂತಿಹೋಮ , ಮಹಾಮಂಗಳಾರತಿ , ಬುಧವಾರದಂದು ಪರಮ ಪೂಜ್ಯ ಆಚಾರ್ಯ ಶ್ರೀ ಶ್ರೀ ನೇಮಚಂದ್ರ ಸಿದ್ಧಾಂತ ಚಕ್ರವತ್ರಿಗಳವರ ಗುರುಪೀಠಕ್ಕೆ ಪೂಜೆ , ಗಣದರವಲಿ ಆರಾಧನೆ ಹಾಗೂ ಗುರುವಾರ ಭಗವಾನ್ ಶ್ರೀ ಶೀತಲನಾಥ ತೀರ್ಥಂಕರರೇ ಸ್ಯ ಶ್ರೀ ಬ್ರಹ್ಮೇಶ್ಯ ಹಾಗೂ ಭಗವಾನ್ ಶ್ರೀ ನೇಮನಾಥ ತೀರ್ಥಂಕರರೇ ಶ್ರೀ ಶ್ರೀ ಕೂಷ್ಮಾಂಡಿನೀ ದೇವಿ ಅಮ್ಮನವರಿಗೆ ಹಾಗೂ ಧ್ವಾರಪಾಲಕರಿಗೆ , ದಶದಿಕ್ಪಾಲಕರಿಗೆ ಮತ್ತು ಕ್ಷೇತ್ರಪಾಲಕರಿಗೆ ಶೋಡಷೋಪಚಾರ ಪೂಜೆ , ಗುಳ್ಳಕಾಯಿ ಅಜ್ಜಿ ಹಾಗೂ ಶ್ರೀ ಮಹಾ ಶಿಲ್ಪಿಗೆ ಗುಣ ಗೌರವ ಪೂಜೆ ಸಲ್ಲಿಸಿ ಪಂಚ ಕುಂಭ ವಿನ್ಯಾಸ ಕಳಸಗಳಿಂದ ಸ್ವಚ್ಛತಾ ಶುಭಾರಂಭ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ಮುಖ್ಯ ಪುರೋಹಿತರಾದ ನಂದಕುಮಾರ್ ರವರು ವಹಿಸಿದ್ದರು.
ನಂತರ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ವಿಂಧ್ಯಗಿರಿಯ ಮೇಲಿನ ಪರಿಸರ ಮತ್ತು ಮೂರ್ತಿಯ ವೈಙ್ನಾನಿಕ ಸಂರಕ್ಷಣೆ ದೃಷ್ಠಿಯಿಂದ ಅಭಿಷೇಕಕ್ಕೂ ಮುನ್ನ ರಾಸಾಯನಿಕ ಸ್ವಚ್ಛತಾ ಕಾರ್ಯ ನೆರವೇರಿಸಲಾಗುತ್ತಿದ್ದು, ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಾಯದ ವಿಙ್ನಾನ ವಿಭಾಗವು ಇದರ ನೇತೃತ್ವ ವಹಿಸಿದೆ. ಮಹಾಮಸ್ತಕಾಭಿಷೇಕಕ್ಕೂ ಮೊದಲು ಹಾಗು ಅಭಿಷೇಕದ ನಂತರ ಮೂರ್ತಿಯನ್ನು ಸಂಪ್ರದಾಯದಂತೆ ಸ್ವಚ್ಛಗೊಳಿಸುವ ಕಾರ್ಯ ಹಿಂದಿನಿಂದ ಬಂದಿದ್ದು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಅಂಟುವಾಳದ ಕಾಯಿ ಹಾಗೂ ಸೀಗೆಕಾಯಿಯನ್ನು ಬಳಸಿ ಮೂರ್ತಿಯನ್ನು ಸ್ವಚ್ಛಗೊಳಿಸಲಾಗುವುದು. ಕ್ಷೇತ್ರದ ಪರಂಪರೆಯಂತೆ ಎಲ್ಲಾ ಜಿನಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಒಳ್ಳೆ ಮಳೆ, ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ವಿಙ್ನಾನ ವಿಭಾಗ ಸಹಾಯಕ ಅಧೀಕ್ಷಕ ಡಾ|| ಎಮ್. ಪಿ ಸುಜೀತ್, ಆಡಳಿತ ಅಧಿಕಾರಿ ಙ್ನಾನಪ್ರಭು, ಸಹಾಯಕ ರಾಸಾಯನಿಕ ತಙ್ನ ಸಮೀರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮ ಪ್ರಭಾಕರ್ , ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ. ಪದ್ಮಕುಮಾರ್ ಮುಂತಾದವರು ಉಪಸ್ಥಿತರಿದ್ದರು.














