ಜೈಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಇಂದು ನಾವು ಪರಿಚಯಸಲಿರುವ ಸುಂದರ ತಾಣ ತನ್ನ ಒಡಲಿನಲ್ಲಿ ಗತ ವೈಭವದ ಚರಿತೆಯನ್ನು ತುಂಬಿಕೊಂಡು ತನ್ನತ್ತ ಸೆಳೆಯುತ್ತಿರುವ ಐತಿಹಾಸಿಕ ಜೈನ ಕೇಂದ್ರ ಮಾಗಡಿ ತಾಲ್ಲೂಕು , ತಿಪ್ಪಸಂದ್ರ ಹೋಬಳಿಯ, ಸಂಕೀಘಟ್ಟ ಗ್ರಾಮ.
ಬೆಂಗಳೂರು ಹಾಸನ ಹೆದ್ದಾರಿಯಲ್ಲಿ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಲಭಾಗದಿಂದ ಸುಮಾರು 8 ಕಿಲೋಮೀಟರ್ ಸಾಗಿದರೆ ನೀವು ಸಂಕೀಘಟ್ಟ ಗ್ರಾಮಕ್ಕೆ ತಲುಪುತ್ತೀರಿ. ಜ್ವಾಲಾಮಾಲಾ ತಂಡ ಅಲ್ಲಿ ತಲುಪಿದಾಗ ಅವರ ಆತ್ಮೀಯ ಸ್ವಾಗತ ಮನಸ್ಸಿಗೆ ಧನ್ಯತಾ ಭಾವದೊಂದಿಗೆ ಅಲ್ಲಿನ ಧರ್ಮ ಬಂಧುಗಳ ಧರ್ಮ ಸಂಸ್ಕಾರದ ಪರಿಚಯ ಮಾಡಿಕೊಟ್ಟಿತು. ಏಕೆಂದರೆ ಅಲ್ಲಿನ ಯುವ ಬಳಗ ಹಿರಿಯರ ಮಾರ್ಗದರ್ಶನದೊಂದಿಗೆ ತಾವೇ ಮುಂದುನಿಂತು ಈ ಬಾರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಕಾರ್ಯಕ್ರಮಕ್ಕೆ ಹೋಗುವ ಮುಂಚೆ ಒಮ್ಮೆ ಇಲ್ಲಿನ ಇತಿಹಾಸ ಹಾಗೂ ಜಿನಮಂದಿರದ ಪರಿಚಯ ಮಾಡಿಕೊಳ್ಳೋಣ.
ಗಂಗರ ಮತ್ತು ಹೋಯ್ಸಳರ ಕಾಲದ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದ ಈ ಕ್ಷೇತ್ರದ ಪುರಾತನ ಹೆಸರು ಸಂಕೇತಪುರ. ಒಂದನೇ ಹೊಯ್ಸಳ ನರಸಿಂಹ ಕ್ರಿ. ಶ 1141 ರಿಂದ 1173 ರ ತನಕ ಆಡಳಿತದ ಅವಧಿಯಲ್ಲಿ ಈ ಬಸದಿ ನಿರ್ಮಿಸಿದ್ದು ಈ ಬಸದಿಯನ್ನು ನೋಡಿಕೊಳ್ಳಲು ಶೆಟ್ಟರ ಕುಟುಂಬವನ್ನು ನೇಮಿಸಿದ್ದರು. ಇಲ್ಲಿನ ಮೂಲ ಮೂರ್ತಿಯಾಗಿ ವರ್ಧಮಾನ ತೀರ್ಥಂಕರರ ಐದು ಅಡಿ ಎತ್ತರದ ಮೂರ್ತಿ ಇದ್ದು, ಮೂಲ ಮೂರ್ತಿಯ ಹಿಂಭಾಗದಲ್ಲಿ ಶಾಸನವಿದ್ದು ಅದರ ಪ್ರಕಾರ ಕ್ರಿ.ಶ 1581 ರಲ್ಲಿ ಸಂಕೀ ಘಟ್ಟದ ಚಿಕ್ಕಪದ್ಮಣ್ಣ ಈ ಬಸದಿಯಲ್ಲಿ ಕುಳಿತು ಅನಂತನಾಥ ಚರಿತೆ ಎಂಬ ಗ್ರಂಥವನ್ನು ರಚಿಸಿರುವ ಬಗ್ಗೆ ಮಾಹಿತಿ ಇದೆ. ಹಾಗೂ ಈ ಶಾಸನದಲ್ಲಿ ಹೊಯ್ಸಳರ ದೊರೆ ವಿನಯಾತಿಥ್ಯ ನಿಂದ ಒಂದನೇ ನರಸಿಂಹನವರೆಗೆ ವಂಶಾವಳಿಯನ್ನುಈ ಶಾಸನದಲ್ಲಿ ಕೆತ್ತಲಾಗಿದೆ.
ಬಸದಿಯಲ್ಲಿ ಗರ್ಭಗುಡಿ, ಸುಖನಾಸಿ , ನವರಂಗ , ಮುಖಮಂಟಪ , ಪ್ರದಕ್ಷಿಣಾ ಪಥ ಹೊಂದಿದ್ದು ಬಸದಿ ದಕ್ಷಿಣಾಭಿಮುಖವಾಗಿದೆ. ಬಸದಿಯ ಮುಖ ಮಂಟಪವನ್ನು ಮಾಗಡಿ ನಾಡ ಪ್ರಭು ಇಮ್ಮಡಿ ಕಂಪೇಗೌಡರವರು ನಿರ್ಮಿಸಿ ಕೊಟ್ಟಿದ್ದಾರೆಂಬ ಸುದ್ದಿ ಇತಿಹಾಸಕಾರರು ಹೇಳುವಂತದ್ದು. ಈ ವರ್ಧಮಾನ ಬಸದಿಯನ್ನು ನೆಲಮಟ್ಟದಿಂದ 5 ಅಡಿಗಳ ಎತ್ತರದ ಪೌಳಿಯ ಮೇಲೆ ನಿರ್ಮಿಸಲಾಗಿದೆ . ಬಸದಿಯಲ್ಲಿ ಮೆಟ್ಟಿಲುಗಳಿದ್ದು ಎರಡೂ ಬದಿ ಗಂಗರ ಲಾಂಛನಗಳಾದ ಆನೆ ಬಿಂಬಗಳಿವೆ. ನವರಂಗದ ಪ್ರವೇಶಧ್ವಾರದಲ್ಲಿ ಜಯ ವಿಜಯ ಬಳ್ಳಿಯ ಚಿತ್ರಗಳಿದ್ದು, ನವರಂಗದಲ್ಲಿ ನಾಲ್ಕು ಕೆತ್ತನೆಯ ಕಂಬಗಳಿದ್ದು , ನವರಂಗದ ಬಲಗಡೆ ಮಹಾವೀರ, ಬಾಹುಬಲಿ , ಬ್ರಹ್ಮಯಕ್ಷ, ಯಕ್ಷಿಯರ ಮೂರ್ತಿಗಳಿವೆ. ಎಡಗಡೆ ಸರಸ್ವತಿ , ಜ್ವಾಲಾಮಾಲಿನಿ , ಪದ್ಮಾವತಿ ಮಾತೆಯ ವಿಗ್ರಹಗಳಿದ್ದು ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಪಂಚಲೋಹದ ಶ್ರೀ ವರ್ಧಮಾನ ತೀರ್ಥಂಕರರು ವಿರಾಜಮಾನರಾಗಿದ್ದಾರೆ. ಈ ಬಸದಿಯು ದಕ್ಷಿಣಾಭಿಮುಖವಾಗಿದ್ದು. ಮಾನಸ್ಥಂಬ ದಕ್ಷಿಣಾಭಿಮುಖವಾಗಿರುವುದು ವಿರಳ. ಈ ದೋಷ ಪರಿಹಾರಕ್ಕೆ ಮಾನಸ್ಥಂಬದ ಮೇಲೆ ಚತುರ್ಮುಖ ಬಿಂಬಗಳನ್ನು ಪ್ರತಿಷ್ಠಾಪಿಸಿರುವುದರಿಂದ ಎಲ್ಲಾ ದೋಷಗಳು ಪರಿಹಾರವಾಗಲಿದೆ ಎಂದು ಶ್ರವಣಬೆಳಗೊಳದ ಈ ಹಿಂದಿನ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಗಳು ತಿಳಿಸಿದ್ದರು. ಅವರ ಸೂಚನೆಯ ಮೇರೆಗೆ ಈ ಪುರಾತನ 21 ಅಡಿ ಮಾನಸ್ಥಂಭದ ಮೇಲ್ಭಾಗದಲ್ಲಿ ಚತುರ್ಮುಖ ಬಿಂಬಗಳನ್ನು 2014 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಗುರುವಾರ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಸುಂದರವಾದ ಮೂರ್ತಿಯನ್ನು ತಾವುಗಳೆಲ್ಲರೂ ಸಹ ಒಮ್ಮೆ ದರ್ಶನ ಮಾಡಿ ಪುಣ್ಯಭಾಗಿಗಳಾಗಿರಿ.
.














