ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ವೀಕ್ಷಕ ಬಂಧುಗಳೇ ನಮ್ಮ ಇಂದಿನ ಕ್ಷೇತ್ರಪರಿಚಯದಲ್ಲಿ ಕನ್ನಡನಾಡಿನ ದಕ್ಷಿಣ ಭಾಗದಲ್ಲಿರುವ ಅತಿ ಸುಂದರವಾದ ಕೆತ್ತನೆ ಕಲೆಯ ಮೆರಗಿನಿಂದ ಕಂಗೊಳಿಸುತ್ತಿರುವ ಉತ್ತರದ ಐಯೂಳೆ ರೀತಿಯಲ್ಲಿ ಅಷ್ಟಕೋನಕಾರದ ಶಿಲೆಯ ಕಲಾತ್ಮಕ ಶಾಂತಿನಾಥ ಜಿನ ಮಂದಿರವಿರುವ ನಿಟ್ಟೂರು.
ಈ ಕ್ಷೇತ್ರದ ಅದಿದೇವತೆ ಜ್ವಾಲಮಾಲಿನಿ ಅಮ್ಮನವರು ನೆಲೆಸಿ ಈ ನಿಟ್ಟೂರು ದಕ್ಷಿಣದ ಐಯೂಳೆ ಎಂದು ಪ್ರಸಿದ್ದಿ ಪಡೆದಿರುತ್ತದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟುರು ಇಲ್ಲಿರುವ ಕಲಾತ್ಮಕವಾದ ಜಿನ ಮಂದಿರವನ್ನು ಸುಮಾರು ಕ್ರಿ.ಶ 820ರಲ್ಲಿ ವೀರ ಬಲ್ಲಾಳ ಎಂಬ ದಂಡನಾಯಕನು ಆಗಿನ ಸುಪ್ರಸಿದ್ದ ಶಿಲ್ಪಿ ಮಾಳ ಸಿ ಮಲ್ಲಯ್ಯ ಎಂಬವರಿಂದ ನಿರ್ಮಿಸಿದ್ದರುದು ಎಂದು ತಿಳಿದು ಬರುತ್ತದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿಗೆ ಸೇರಿದ ನಿಟ್ಟೂರಿನಲ್ಲಿರುವ ಕಲಾಪುರ್ಣ –ಮಯವಾದ ಬಸದಿಯು ಗರ್ಭ ಗೃಹದಲ್ಲಿ ಮೂಲವಿಗ್ರಹವು ಕಪ್ಪು ಶಿಲೆಯ ಪದ್ಮಾಸನ ಶಾಂತಿನಾಥರ ವಿಗ್ರಹವಿದ್ದು ಭಿನ್ನವಾಗಿದ್ದರಿಂದ ಪಂಚಲೋಹದ ಖಡ್ಗಾಸನ ಶಾಂತಿನಾಥರ ಮೂರ್ತಿಯನ್ನು ಗರ್ಭಗೃಹದಿಂದ ಮುಂದಕ್ಕೆ ಸ್ಥಾಪಿಸಲಾಗಿತ್ತು. ಇದು ಬಂಗಾರದ ಹೊಳಪಿನಿಂದ ಕಂಗೊಳಿಸುತ್ತಿತು. 1968ರಲ್ಲಿ ಕಳ್ಳರು ಈ ಜಿನ ಬಿಂಬವು ಬಂಗಾರದ್ದು ಎಂದು ಭ್ರಮಿಸಿ ಮೂರ್ತಿಯನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿ ವಿಪಲವಾಗಿ, ಎಡ ಭಾಗದ ಒಂದು ಕೈಯನ್ನುಕೊಂಡೊಯ್ಯುತ್ತಾರೆ. ಇದರಿಂದ ಪೂಜಾ ಕಾರ್ಯ ಸ್ಥಗಿತಗೊಂಡಿದ್ದರಿಂದ ಇಲ್ಲಿನ ಶ್ರಾವಕರು ಸುತ್ತಮುತ್ತಲಿನ ಭಕ್ತಾಧಿಗಳ ಸಹಕಾರದಿಂದ ಅಮೃತ ಶಿಲೆಯ ಖಡ್ಗಾಸನದ ಶಾಂತಿನಾಥ ತೀರ್ಥಂಕರರ ಮೂರ್ತಿಯನ್ನು ರಾಜಸ್ಥಾನದ ಜೈಪುರದಿಂದ ತಂದು 24-1969 ರಲ್ಲಿ ಪಂಚಕಲ್ಯಾಣ ವಿಧಿವಿಧಾನಗಳಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯ ನಡೆಸುತ್ತಾ ಬಂದಿದ್ದಾರೆ. ಈ ಜಿನಾಲಯವು ಬಳಪದ ಕಲ್ಲಿನದ್ದಾಗಿದೆ. ಹೊರ ಭಾಗದಲ್ಲಿ ಬಿತ್ತಿಚಿತ್ರಗಳು ಹಳೆ ಬೀಡು ಬೇಲೂರಿನ ಶಿಲ್ಪಕಲೆಯ ರೀತಿಯಲ್ಲಿ ನಿರ್ಮಿಸಿದ್ದಾರೆ. ಒಳಭಾಗದಲ್ಲಿ ಒಂದು ಗರ್ಭಗೃಹದ ಸುಕನಾಸಿ ನಂತರ ಕಪ್ಪು ಶಿಲೆಯಿಂದ ಕೆತ್ತಲಾದ ನಾಲ್ಕು ಕಂಬಗಳಿದ್ದು ಇವು ಎಲ್ಲವು ಒಂದೇತರಹದಲ್ಲಿರುತ್ತದೆ.
ಒಂಭತ್ತು ಅಂಕಣಗಳ ನವರಂಗವಿದ್ದು ಪ್ರತಿಯೊಂದು ಅಂಕಣದ ಮೇಲ್ಚಾವಣಿಯು ಸುಂದರವಾದ ಕೆತ್ತನೆಯ ಕೆಲಸದಿಂದ ಕೂಡಿದ್ದು ತೀರ್ಥಂಕರರ ವಿಗ್ರಹಗಳು ಹಾಗೂ 24 ತೀರ್ಥಂಕರರ ಲಾಂಛನಗಳು, ಪರಿವಾರ ದೇವತೆಗಳು, ನವರಸ ವಾದ್ಯ, ಯಕ್ಷ ಯಕ್ಷಿಯರು, ಹೂವು ಬಳ್ಳಿಗಳು, ಲತಾ ಮಂಟಪಗಳಿಂದ ಅಲಂಕರಿಸಿದ್ದಾರೆ. ಮಧ್ಯ ಭಾಗದಲ್ಲಿರುವ ನವರಂಗದಲ್ಲಿ ಬಹಳ ವಿಶೇಷ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ. ಮಧ್ಯ ನಟರಾಜನ ನೃತ್ಯ ಹಾಗೂ ಇದರ ಕೆಳಭಾಗದಲ್ಲಿ ಎಲ್ಲ ಪರಿವಾರದ ದೇವತೆಗಳು ಅಂದೆ ಐರಾವತದ ಮೇಲೆ ಇಂದ್ರ ಶಶಿ ದೇವಿಯರು, ನಂದಿ ಮೇಲೆ ಶಿವ ಪಾರ್ವತಿ, ನವಿಲಿನ ಮೇಲೆ ಬ್ರಹ್ಮ ಸರಸ್ವತಿಯರು, ಹನುಮಂತನ ಭುಜದ ಮೇಲೆ ರಾಮ ಲಕ್ಷ್ಮಣರನ್ನು ಹೊತ್ತ ಚಿತ್ರಣ, ವಾಲಿ ಸುಘ್ರೀವರ ಚಿತ್ರಣಗಳನ್ನು ಚಿತ್ರಿಸಲಾಗಿದೆ. ಈ ಎಲ್ಲ ಚಿತ್ರಗಳನ್ನು ವೀಕ್ಷಿಸಿಸಿದರೆ ಸರ್ವ ಧರ್ಮದ ಸಂಕೇತವಾಗಿ ಸುಮಾರು 1200 ವರ್ಷಗಳ ಹಿಂದೆಯೇ ಈ ಜೈನ ಧರ್ಮ ವಿಶ್ವ ಧರ್ಮವೆಂದು ಸಾರುತ್ತಿದೆ. ಮಧ್ಯ ಭಾಗದ ತೊಲೆಯಲ್ಲಿ ಮಹಿಷವಾಹಿನಿ ಶ್ರೀ ಜ್ವಾಲಮಾಲಿನಿ ದೇವಿಯ ವಿಗ್ರಹ ಮೂಡಿರುತ್ತದೆ. ಈ ದೇವಿಯು ಭಕ್ತರ ಅಭಿಷ್ಟವನ್ನು ಸಲ್ಲಿಸುವಳೆಂಬ ಭಾವನೆಯು ಜನರಲ್ಲಿ ಬೆಳೆದು ಬಂದಿದೆ. ಈ ಜ್ವಾಲಮಾಲಿನಿ ದೇವಿ ಪೂಜಾದಿಗಳನ್ನು ಸಲ್ಲಿಸುವ ಭಕ್ತ ಜನರು ಕರ್ನಾಟಕದಾಧ್ಯಂತ ಭಾನುವಾರದಂದು ವಿಶೇಷ ಪೂಜೆ ಮಾಡಿಸಿ ತಮ್ಮ ಅರಕೆಯನ್ನು ಸಲ್ಲಿಸಿ ಮನಃಶಾಂತಿ ಪಡೆದು ಕೃತಾರ್ಥರಾಗಿ ದೇವಿಯ ಕೃಪೆಗೆ ಪಾತ್ರರಾಗಿ ಧನ್ಯತೆ ಪಡೆಯುತ್ತಾರೆ.
ಇದರಿಂದ ಇದು ಅತಿಶಯ ಕ್ಷೇತ್ರವಾಗಿದೆ. ನವರಂಗದ ಮುಂದೆ ಚಂದ್ರ ಶಾಲೆಯಿದೆ, ಇಲ್ಲಿ ಒಂಭತ್ತು ಕಂಬಗಳು ಒಂದೊಂದು ಒಂದೊಂದು ರೀತಿಯಲ್ಲಿ ವಿಭಿನ್ನತೆಯಿಂದ ಚಿತ್ರಿಸಿದ್ದಾರೆ. ಕಂಬಗಳು ದುಂಡಗಿದ್ದು ಮೇಲ್ಭಾಗದಲ್ಲಿ ಚೌಕಾಕೃತಿಯ ಕಟ್ಟೆಯ ಮೇಲೆ 16 ಕೋನಗಳ ಚಿತ್ತಾರದ ಮೇಲೆ ತೊಲೆಗಳನ್ನು ಕೂರಿಸಿದ್ದಾರೆ. ನಂತರ ದಕ್ಷಿಣ ದಿಕ್ಕಿಗೆ ಪದ್ಮಾವತಿ ದೇವಿ ಗುಡಿ ಇದ್ದು ಹಿತ್ತಾಳೆಯ ಪೀಠದ ಮೇಲೆ ಪದ್ಮಾವತಿಯ ವಿಗ್ರಹವಿದೆ. ಉತ್ತರಕ್ಕೆ ಒಂದು ಗುಡಿಯಲ್ಲಿ ಬ್ರಹ್ಮ ದೇವರ ವಿಗ್ರಹ ಸ್ಥಾಪಿಸಲಾಗಿದೆ. ಇದರಿಂದ ಈ ಬಸದಿಯು ತ್ರಿಕುಟಾಚಲ ಬಸದಿ ಎಂದಿರ ಬೇಕು ಎಂದು ಊಹಿಸಲಾಗುವುದು. ಇಲ್ಲಿ ಕೆಲವು ಶಾಸನಗಳು ಕೂಡ ದೊರಕಿವೆ.
ಇಂತಹ ಒಂದು ಐತಿಹಾಸಿಕ ಬಸದಿಗೆ ಒಮ್ಮೆ ಭೇಟಿನೀಡಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














