ಕನಕಗಿರಿ ಮಸ್ತಕಾಭಿಷೇಕ

ಕನಕಗಿರಿಯಲ್ಲಿ ವೈಭವಯುತವಾಗಿ ನಡೆಯುತ್ತಿರುವ ಮಹೋತ್ಸವದಲ್ಲಿ 21 – 1 – 2017ರಂದು ಬೆಳಿಗ್ಗೆ ನವ ಗ್ರಹ ಹಾಗೂ ಗಣದರವಲಯ ಆರಾಧನೆ, ಶುಕ್ರಗ್ರಹ 108 ಜಪ ಹಾಗೂ ಶಾಂತಿಹೋಮ ಪೂಜೆ ಮಾಡಲಾಯಿತು. ಅಂದು ಮಧ್ಯಾಹ್ನ ಧಾರ್ಮಿಕ ಸಭೆಗಾಗಿ ಸುಂದರ ವೇದಿಕೆ ಸಜ್ಜಾಗಿತ್ತು. ಶ್ರೀ ಪೀಠದ ಉಧ್ಘಾಟನೆ ಮಾಡಲು ಹಾಗೂ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ|| ವೀರೆಂದ್ರ ಹೆಗ್ಗಡೆಯವರು  ಸಭೆಗೆ ಮುನ್ನ ಕನಕಾದ್ರಿಯ ಪಾಶ್ವಾನಾಥ ಬಸದಿಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಮಹಾ ಸ್ವಾಮೀಜಿಯವರು ಮಹೋತ್ಸವದ ಪ್ರಗತಿ ಕಾರ್ಯಗಳ ಬಗ್ಗೆ ತಿಳಿಸಿದರು. ಶ್ರೀ ವೀರೆಂದ್ರ ಹೆಗ್ಗಡೆಯವರು ತಮ್ಮ ಅಮೃತ ಹಸ್ತದಿಂದ ಭಗವಾನ್ ಬಾಹುಬಲಿ ಶ್ರೀ ಪೀಠದ ಉಧ್ಘಾಟನೆಯನ್ನು ನೆರೆವೇರಿಸಿದರು. ಮಹೋತ್ಸವದಲ್ಲಿ ಪ್ರತಿಷ್ಟಾಪನೆ ಗೊಳ್ಳಲಿರುವ ಭಗವಾನ್ ಬಾಹುಬಲಿ ಮೂರ್ತಿಯ ದರ್ಶನ ಪಡೆದರು.