ಶ್ರೀ ಕ್ಷೇತ್ರ ಕನಕಗಿರಿ ಕನಕಾದ್ರಿ, ಇದು ಕನಕಗಿರಿ ಕ್ಷೇತ್ರ ಕರ್ನಾಟಕದ ಜೈನ ತೀರ್ಥ ಕ್ಷೇತ್ರಕಳಲ್ಲಿ ಇದು ಒಂದು ಅತಿಶಯದ ಕ್ಷೇತ್ರ ವಾಗಿದೆ. ಕನಕ ಎಂದರೆ ಚಿನ್ನ, ಗಿರಿ ಎಂದರೆ ಬೆಟ್ಟ, ಇದು ಹೆಸರಿಗೆ ತಕ್ಕಂತೆ ಚಿನ್ನದ ಬೆಟ್ಟವಾಗಿದೆ. ಹಿಂದೆ ಹೇಮಾಂಗ ದೇಶವಾಗಿದ್ದ ಕ್ಷೇತ್ರವೇ ಇಂದಿನ ಕನಕಗಿರಿ ಕ್ಷೇತ್ರ ವಾಗಿದೆ. ಇದು ಬೆಟ್ಟದ ಮೇಲಿರುವ 1008 ಭಗವಾನ್ ಶ್ರೀ ಪಾರ್ಶ್ವ ನಾಥ ಸ್ವಾಮಿ ಜಿನ ಚೈತ್ಯಾಲಯ. ವಿಶಾಲವಾದ ಆಲಯವನ್ನು ಹೊಂದಿದ್ದು ಪೂರ್ವಾಭಿಮುಖವಾಗಿದೆ.
ಗಂಗ ವಂಶದ ರಾಜರು ಇದನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ. ಇದು ಚೈತ್ಯಾಲಯದ ಎದುರು ಇರುವ ಚಪ್ಪರ ಮಂಟಪ ಚೈತ್ಯಾಲಯದ ಸ್ವಲ್ಪ ದೂರದಲ್ಲಿ ದೊಣೆ ಇದೆ. ಆ ದೊಣೆಯ ನೀರನ್ನು ಭಗವಂತನ ಪೂಜೆಗೆ ಮಾತ್ರ ಬಳಸಲಾಗುತ್ತದೆ. ಈ ದೊಣೆಯನ್ನು ಮಡಿಯಿಂದ ಶುಚಿಯಾಗಿ ಇಡಲಾಗಿದ್ದು ಸುತ್ತಲೂ ಎತ್ತರದ ಗೋಡೆ ಇದೆ. ಈ ದೊಣೆಯಲ್ಲಿ ನೀರು ಎಂದಿಗೂ ಬತ್ತುವುದಿಲ್ಲ ಎಂದು ಹೇಳುತ್ತಾರೆ. ಇದು ಲೋಕ ವಿಖ್ಯಾತರಾದ ಪೂಜ್ಯ ಪಾದಾಚಾರ್ಯ ರ ಚರಣ ಚಿಹ್ನೆ ಪೂಜ್ಯ ಪಾದಾಚಾರ್ಯರು ಇಲ್ಲಿ ನೆಲೆಸಿದ್ದರೆಂಬ ಐತಿಹ್ಯವಿದೆ. ಇವರು ಈ ಕನಕಗಿರಿ ಕ್ಷೇತ್ರವನ್ನೇ ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು. ಆದ್ದರಿಂದಲೇ ಈ ಕ್ಷೇತ್ರದ ಮಹಿಮೆ ಹೆಚ್ಚಿದೆ. ಪೂಜ್ಯ ಪಾದರ ಕಾಲ ಕ್ರಿ. ಶ. 5 ನೆಯ ಶತಮಾನವೆಂದು ತಿಳಿದುಬರುತ್ತದೆ. ಪೂಜ್ಯ ಪಾದಾಚಾರ್ಯರು ತರ್ಕ , ವ್ಯಾಕರಣ, ಸಿದ್ದಾಂತ ವೈದ್ಯ ಮುಂತಾದ ಅನೇಕ ವಿಷಯಗಳಲ್ಲಿ ಪಾಂಡಿತ್ಯ ಉಳ್ಳವರಾಗಿದ್ದರು. ದೇವತೆಗಳು ಇವರ ಪಾದಕ್ಕೆ ಪೂಜೆ ಸಲ್ಲಿಸಿದ್ದರಿಂದ ಇವರಿಗೆ ಪೂಜ್ಯ ಪಾದ ಎಂಬ ಹೆಸರು ಬಂದಿತ್ತೆಂದು ತಿಳಿದು ಬರುತ್ತದೆ. ಇವರಿಗೆ ಶಾಸ್ತ್ರ ವಿಚಾರದಲ್ಲಿ ಅನುಮಾನ ಉಂಟಾದಾಗ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅವರು ಪೂರ್ವ ವಿದೇಹ ಕ್ಷೇತ್ರಕ್ಕೆ ಹೋಗಿ ಸಾಕ್ಷಾತ್ ಭಗವಂತನ ದರ್ಶನ ಮಾಡಿ ತಮ್ಮ ಅನುಮಾನವನ್ನು ಪರಿಹರಿಸಿ ಕೊಳ್ಳುತ್ತಿದ್ದರಂತೆ. ಒಮ್ಮೆ ಇವರಿಗೆ ದೃಷ್ಠಿದೋಷ ಉಂಟಾದಾಗ ಭಗವಾನ್ ಶಾಂತಿನಾಥರ ಮೂರ್ತಿಯ ಮುಂದೆ ಕುಳಿತು ಭಕ್ತಿಯಿಂದ ಶಾಂತ್ಯೇಷ್ಠಕವನ್ನು ರಚಿಸಿ ಹೇಳಿದಾಗ ಅದು ಪರಿಹಾರವಾಯಿತೆಂದು ತಿಳಿದುಬರುತ್ತದೆ. ಸರ್ವಾರ್ಥಸಿಧ್ಧಿ ಸಮಾಧಿ ಶತಕ ಇಷ್ಠೋಪದೇಶ, ದಶಭಕ್ತಿ, ಶಾಂತ್ಯೇಷ್ಠಕ, ಜೈನೇಂದ್ರ ವ್ಯಾಕರಣ ಇವು ಪೂಜ್ಯ ಪಾದರ ಕೃತಿಗಳಾಗಿವೆ. ಕಲ್ಯಾಣಕಾರಕ ಎಂಬ ವೈದ್ಯ ಗ್ರಂಥವನ್ನು ಲೋಕೋಪಕಾರಾರ್ಥವಾಗಿ ರಚಿಸಿದ್ದರೆಂಬ ಹೇಳಿಕೆಯೂ ಇದೆ. ಪೂಜ್ಯ ಪಾದರ ಅಳಿಯ ನಾಗಾರ್ಜುನನಿಗೆ ಮಾತೆ ಪದ್ಮಾವತಿ ಸಿದ್ದರಸವನ್ನು ಕರುಣಿಸಿದ್ದರೆಂಬ ಐತಿಹ್ಯವಿದೆ. ಜಿನ ಮಂದಿರ ದ ಹೊರಗೆ ಕೋಟೆಯಿದ್ದು ಈ ಕೋಟೆಯೊಳಗೆ ಮುನಿ ನಿವಾಸ , ಯಾತ್ರಿ ನಿವಾಸ ಉಗ್ರಾಣ ಮುಂತಾದವುಗಳು ಇವೆ. ಕೋಟೆಯ ಹೊರಗೆ ನಾಗಾರ್ಜುನ ಗವಿಯಿದೆ.
ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಕೆಲವು ಶಾಸನಗಳು ಇಲ್ಲಿವೆ. ಪ್ರಸಿದ್ದ ಹೋಯ್ಸಳ ರಾಜನು ಈ ಕ್ಷೇತ್ರದ ದರ್ಶನ ಪಡೆದು ಜಯಶಾಲಿಯಾದುದರಿಂದ ಪಾರ್ಶ್ವನಾಥ ಸ್ವಾಮಿಯವರನ್ನು ವಿಜಯ ಪಾರ್ಶ್ವನಾಥ ಸ್ವಾಮಿಯೆಂದು ಕರೆದನಂತೆ. ಗಂಗರು , ಹೋಯ್ಸಳರು, ವಿಜಯನಗರ ಮೈಸೂರಿನ ಅರಸರುಗಳು ಅನೇಕ ಭೂಮಿ, ಗ್ರಾಮಗಳನ್ನು ದತ್ತಿ ಬಿಟ್ಟಿರುವುದಾಗಿ ಇಲ್ಲಿಯ ಶಾಸನಗಳಲ್ಲಿ ಉಲ್ಲೇಖವಿದೆ. ಬಸದಿಗಾಗಿ ಆದಾಯ ಬರುತ್ತಿದ್ದು ಅದರಲ್ಲಿ ಆಗಾಗ ಏರುಪೇರುಗಳುಂಟಾಗುತ್ತಿದ್ದರೂ ಸಹ ಒಮ್ಮೆಯೂ ಪೂಜೆ ನಿಂತಿಲ್ಲ ಸಾಂಗೋಪವಾಗಿ ಸಾಗುತ್ತಾ ಬಂದಿದೆ. ಮಲೆಯೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಳೆ ಇಲ್ಲದೆ ಬರ ಉಂಟಾದರೆ ಸುತ್ತಲಿನ ಎಲ್ಲಾ ಗ್ರಾಮಗಳ ಎಲ್ಲಾ ಧರ್ಮೀಯರು ಸೇರಿ ಕನಕಗಿರಿಯ ಉರಿಸಿಂಗಿ ಗುಡ್ಡದ ಪಕ್ಕದಲ್ಲಿರುವ ಪಾರ್ಶ್ವನಾಥರ ಚತುರ್ಮುಖ ಬಿಂಬವನ್ನೊಳಗೊಂಡಿರುವ ಪುಟ್ಟ ಮಾನಸ್ತಂಭಕ್ಕೆ ಹಾಗೂ ಪಾದುಕೆಗಳಿಗೆ ಅಭಿಷೇಕ ಮಾಡಿದ್ದಲ್ಲಿ ಪೂಜೆ ಮುಗಿಯುವುದರೊಳಗಾಗಿ ಕಪ್ಪು ಕಾರ್ಮೋಡ ಕವಿದು ತಪ್ಪದೇ ಮಳೆಯಾಗುತ್ತದೆಂಬ ಐತಿಹ್ಯವಿದೆ. ಇಂದಿಗೂ ಎಲ್ಲಾ ಧರ್ಮೀಯರು ಸೇರಿ ಆಷಾಢ ಮಾಸದಲ್ಲಿ ಅಲ್ಲಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಇಲ್ಲಿ ರಾಹು ಮತ್ತು ಕೇತು ಗ್ರಹಗಳ ದೋಷದಿಂದಾಗುವ ಕಾಳಸರ್ಪದೋಷ ನಿವಾರಣೆಯಾಗುವುದು ಎಂಬುದು ಎಲ್ಲಾ ಧರ್ಮಾವಾಲಂಭಿಗಳ ನಂಬಿಕೆಯಾಗಿದೆ. ಈ ಉದ್ದೇಶದಿಂದಾಗಿಯೇ ಇಲ್ಲಿ ಅಮ್ಮ ಕೂಷ್ಮಾಂಡಿನಿ ದೇವಿ ಮತ್ತು ಪದ್ಮಾವತಿ ದೇವಿಯರ ಪ್ರಾಚೀನ ಶಿಲಾ ಮೂರ್ತಿಗಳು ಪರಸ್ಪರ ಅಭಿಮುಖವಾಗಿ ಸ್ಥಾಪಿಸಲ್ಪಟ್ಟಿವೆ ಎಂದು ತಿಳಿದು ಬರುತ್ತದೆ. ಅನೇಕ ಪಾದುಕೆಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.
ಅನೇಕ ಜೀರ್ಣೋಧ್ಧಾರ ಕಾರ್ಯಗಳಾಗಿ ಮಹಾದ್ವಾರ ಮುಂತಾದುವುಗಳನ್ನು ನಿರ್ಮಿಸಲಾಗಿದೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳ ಮಠದ ಪೂಜ್ಯ ಜಗದ್ಗುರುಗಳಾದ ಕರ್ಮಯೋಗಿ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಯವರು ತಮ್ಮ ಶಾಖಾ ಮಠವಾದ ಈ ಕ್ಷೇತ್ರದಲ್ಲಿ ಹಿಂದಿನಂತೆ ಧರ್ಮ ಪೀಠವು ಮುಂದುವರೆಯಲೆಂದು ಆಶಿಸಿ ತಮ್ಮ ಶಿಷ್ಯರಾದ ಸ್ವಸ್ತೀಶ್ರೀ ಭುವನಕೀರ್ತಿ ಸ್ವಾಮೀಜಿಯವರ ನ್ನು 1997ರ ಅಕ್ಷಯ ತೃತೀಯದಂದು ಶ್ರೀ ಕ್ಷೇತ್ರ ಕನಕಗಿರಿಯ ಧರ್ಮ ಪೀಠಾಧ್ಯಕ್ಷರನ್ನಾಗಿ ನೇಮಿಸಿರುತ್ತಾರೆ. ಯುವಕರಾದ ಭುವನಕೀರ್ತಿ ಸ್ವಾಮೀಜಿಯವರು ಕನ್ನಡ, ಸಂಸ್ಕ್ಕತ , ಪ್ರಾಕ್ರುತ, ಹಿಂದಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಉಳ್ಳವರಾಗಿದ್ದು ನಿರರ್ಗಳವಾಗಿ ಉಪನ್ಯಾಸ ನೀಡುತ್ತ ಧರ್ಮಾಭಿಮಾನಿಗಳನ್ನು ಮಂತ್ರ ಮುಗ್ದರನ್ನಾಗಿಸುತ್ತಾರೆ.
ಪೀಠಾರೋಹಣ ಮಾಡಿದಾಗಿನಿಂದ ಧರ್ಮಸಾಧನೆಗಯ್ಯುತ್ತಾ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಕ್ಷೇತ್ರ ರಕ್ಷಣೆ ಹಾಗು ಅಭಿವೃದ್ದಿಗಾಗಿ ಸಕ್ರಿಯವಾಗಿ ಅಹನಿಶಿ ದುಡಿಯುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಕನಕಗಿರಿ ಕ್ಷೇತ್ರವನ್ನು ಗ್ರಂಥಕಾರರು ನಾಕೋಪಮಾನ ಶೈಲ ಎಂದು ಬಣ್ಣಿಸಿದ್ದಾರೆ. ಅಂದರೆ ಸ್ವರ್ಗದಂತಿರುವ ಶೈಲ ಎಂದರ್ಥವಾಗುತ್ತದೆ. ಈ ಕನಕಗಿರಿ ಕ್ಷೇತ್ರವು ಪ್ರಸಿದ್ಧ ಜೈನ ಅತಿಶಯ ಕ್ಷೇತ್ರಗಳಲ್ಲಿ ಒಂದಾಗಿದೆ. ಚಾಮರಾಜನಗರ ರಸ್ತೆಯಲ್ಲಿ ಒಳದಾರಿಯಲ್ಲಿ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು ಮಲೆಯೂರಿನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿದೆ. ಊರಿನಿಂದ ಬೆಟ್ಟದ ತಪ್ಪಲಿಗೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಬೆಟ್ಟವನ್ನೇರಲು ಸೋಪಾನಗಳಿದ್ದು ಇತ್ತೀಚೆಗೆ ಬೆಟ್ಟದ ಮೇಲೆ ವಾಹನಗಳು ಹೋಗುವಂತೆ ರಸ್ತೆಯನ್ನು ನಿರ್ಮಿಸಲಾಗಿದೆ. ಪೂಜ್ಯ ಸ್ವಾಮೀಜಿಯವರ ಸತತ ಪರಿಶ್ರಮದಿಂದಾಗಿ ಹೆಚ್ಚಿನ ಅಭಿವೃದ್ಧಿಯಾಗಲು ಸಾಧ್ಯವಾಗಿದೆ.
ಶಿಲಾಶಾಸನಗಳ ಪ್ರಕಾರ ಪೂಜ್ಯ ಅಜಿತ ಮುನಿ, ಚಂದ್ರಸೇನಾಚಾರ್ಯ, ವಜ್ರಕೀರ್ತಿ ಮುನಿ , ವಿದ್ಯಾನಂದಿಗಳು , ವಾದೀಪಸಿಂಹ , ಬಾಹುಬಲಿಪಂಡಿತ ಮುಂತಾದವರಲ್ಲದೇ ಇನ್ನೂ ಅನೇಕ ಮಂದಿ ಭಟ್ಟಾರಕರು ಹಾಗೂ ಅನೇಕ ಜೈನ ಮುನಿಗಳು ಇಲ್ಲಿ ಸಲ್ಲೇಖನ ವಿಧಿ ಪೂರ್ವಕ ಸಮಾಧಿ ಹೊಂದಿದರೆಂದು ತಿಳಿದುಬರುತ್ತದೆ.
ಇತ್ತೀಷೆಗೆ ಅಂದರೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ನಿಮಿತ್ತ ದಕ್ಷಿಣ ಪಥ ವಿಹಾರ ಮಾಡಿದ್ದ ಅನೇಕ ಆಚಾರ್ಯರು , ಮುನಿಗಳು, ತ್ಯಾಗಿಗಳು ಕನಕಗಿರಿ ಕ್ಷೇತ್ರ ದರ್ಶನಕ್ಕಾಗಿ ಆಗಮಿಸಿದ್ದಲ್ಲದೇ ಹಲವಾರು ತ್ಯಾಗಿಗಳು 2006 ರ ಚಾತುರ್ಮಾಸವನ್ನು ಸಹ ಇಲ್ಲಿಯೇ ಕೈಗೊಂಡಿದ್ದರು.
ಬನ್ನಿ ಕನಕಗಿರಿ ಕ್ಷೇತ್ರ ದರ್ಶನ ಮಾಡಿ ಧನ್ಯರಾಗೋಣ. ಪುಣ್ಯ ಭಾಗಿಗಳಾಗೋಣ.














