ಜ್ವಾಲಾಮಾಲಾಸುದ್ದಿ / 2022

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಹೊಸದುರ್ಗ ತಾಲ್ಲೂಕಿನ ಜಾನಕಲ್ಲು ತನ್ನದೇ ಆದ ಮಹತ್ತರವಾದ ಸ್ಥಾನವನ್ನು ಹೊಂದಿರುವ ಪ್ರದೇಶ. ಜಿಲ್ಲಾ ಕೇಂದ್ರದಿಂದ 48 ಕಿಲೋ ಮೀಟರ್ ತಾಲ್ಲೂಕು ಕೇಂದ್ರದಿಂದ 14 ಕಿಲೋಮೀಟರ್ ದೂರವಿದೆ. ಚಿತ್ರದುರ್ಗ ಮತ್ತು ಹೊಸದುರ್ಗ ಕೋಟೆಗಳ ಮಧ್ಯೆ ಆಯ್ದು ಹೋಗುವ ಮಾರ್ಗದಲ್ಲಿ ಸುತ್ತಲೂ ಇರುವ ಜಲಸಂಪತ್ತಿನ ನಡುವೆ ಜಾನಕಲ್ಲು ಇದೆ. ಜಾನಕಲ್ಲು ಗ್ರಾಮಕ್ಕೆ ಮಧುಶಿಲೆ ಎಂಬ ಹೆಸರಿತ್ತು. ನಂತರ ಜೈನ ಕುಟುಂಬಗಳು ಹೆಚ್ಚಾದ್ದರಿಂದ ಜೈನಕಲ್ಲು ಎಂಬ ಹೆಸರು ಬಂದು ನಂತರದಲ್ಲಿ ಜಾನಕಲ್ಲು ಆಗಿದೆ.

ಜೈನ ಬಸದಿಯ ಹಿಂಭಾಗ ಮತ್ತು ಮುಂಭಾಗದ ಕೇರಿಗಳಲ್ಲಿ ಜೈನರು ಹೆಚ್ಚಾಗಿ ವಾಸವಿದ್ದ ಕಾಲದಲ್ಲಿ ಆ ಕುಟುಂಬಗಳಿಗೆ ಬಸದಿ ಮನೆಗಳು ಹೆಸರು ಬಂತು. ಈಗಲೂ ಆ ಕುಟುಂಬಗಳು ಕಾಣಸಿಗುತ್ತವೆ. ಆದಿ ಹಳೆ ಶಿಲಾಯುಗದ ನೆಲೆಯನ್ನು ಹೊಂದಿ ಪ್ರಸಿದ್ದಿ ಪಡೆದ ಸ್ಥಳವಾದ ಈ ಗ್ರಾಮದ ಬೆಟ್ಟದ ಮೇಲೆ ಜೈನ ಮುನಿಗಳು ವಾಸವಾಗಿದ್ದರು. ಹಾಗೂ ಜೈನ ಮುನಿಗಳು ಸಲ್ಲೇಖನ ವ್ರತ ಪಡೆದು ಸ್ವರ್ಗಸ್ಥರಾದ ಬಂಡೆಗಳ ಮೇಲೆ ಚಿತ್ರಗಳನ್ನು ಕೆತ್ತಲಾಗಿದೆ. ಅಲ್ಲದೇ ಬ್ರಹ್ಮದೇವನ ಹೊಂಡ ಮತ್ತು ಬ್ರಹ್ಮದೇವರ ಚೈತ್ಯಾಲಯಗಳನ್ನು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕೋಟೆಯನ್ನು ಹೊಂದಿ ಮಹತ್ವದ ಸ್ಥಾನವನ್ನು ಐತಿಹಾಸಿಕವಾಗಿ ಪಡೆದುಕೊಂಡಿದೆ ಈ ಗ್ರಾಮ. ಇಲ್ಲಿನ ಬಸದಿಯು ಪುರಾತನವಾಗಿದ್ದು ಮೂಲ ಮೂರ್ತಿ ಶ್ರೀ ನ್ಯೇಮಿನಾಥ ಸ್ವಾಮಿ ಹಾಗೂ ಮಾತೆ ಪದ್ಮಾವತಿ ದೇವಿ ನೆಲೆಸಿದ್ದಾರೆ. ಪದ್ಮಾವತಿ ದೇವಿ ಬೆಳ್ಳೂರು ತುರುವೇಕೆರೆಯಿಂದ ಬಂದು ನೆಲೆಸಿದ ಭಕ್ತರಿಗೆ ಪ್ರಸಾದವನ್ನು ನೀಡಿ ಹರಸುವುದು ವಾಡಿಕೆಯಾಗಿದೆ. ಕಾಲಕಾಲಕ್ಕೆ ಬಸದಿ ಜೀರ್ಣೋದ್ದಾರಗೊಂಡಿದ್ದು ಹೊಸದುರ್ಗ ಜೈನಸಮಾಜದ ಸಹಕಾರವೂ ಕೂಡ  ಈ ಬಸದಿಗೆ ಇದೆ. 2010 ರಲ್ಲಿ ಪರಮಪೂಜ್ಯ ಮುನಿಶ್ರೀ  ಪ್ರಮುಖಸಾಗರ  ಮುನಿಮಹಾರಾಜರ ನೇತೃತ್ವದಲ್ಲಿ ಮಾಡಿಕೊಂಡ ಮಾನಸ್ಥಂಭವು ಕಲಾತ್ಮಕವಾಗಿ ನ್ಯೇಮಿನಾಥ ತೀರ್ಥಂಕರರ 16 ಸಪ್ನಾವಳಿಗಳ ಚಿತ್ರಣದಿಂದ ಕೂಡಿದೆ. ಬಸದಿಯ ಜೀರ್ಣೋದ್ದಾರ ಕಾರ್ಯಕ್ಕಾಗಿ ಟ್ರಸ್ಟ್ ಕಮಿಟಿ ಇದೆ. ಹೊಸದುರ್ಗದ ಇಳಕಲ್ ಧನ್ಯಕುಮಾರ್ ರವರು ಅಧ್ಯಕ್ಷರಾಗಿದ್ದಾರೆ. ಜೈನ ಕಮಿಟಿಯಲ್ಲಿ ಕಾರ್ಯದರ್ಶಿಯಾಗಿ ಶ್ರೀ ಪದ್ಮರಾಜು ಮತ್ತು ಶ್ರೀ ಬ್ರಹ್ಮಾನಂದರವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಮೂಲ ನಕ್ಷತ್ರದ ಪೂಜೆ ಮಹೋತ್ಸವದಲ್ಲಿ ನಾಡಿನಾದ್ಯಂತ ಎಲ್ಲಾ ಜಾತಿ ಭಕ್ತರು ಬಂದು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ಪದ್ಮಾವತಿ ಅಮ್ಮನವರ ಆಶೀರ್ವಾದ ಪಡೆಯುತ್ತಾರೆ.ಹಾಗೆಯೇ ನೀವೂ ಕೂಡ  ಒಮ್ಮೆ ಬಂದು ದರ್ಶನ ಪಡೆಯಿರಿ. ಜೈ ಜಿನೇಂದ್ರ..