ಹೊಸದೂರಗ/ ಜ್ವಾಲಾಮಲನ್ಯೂಸ್ / 2021

ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ದೃಷ್ಠಿಯಿಂದ ಪ್ರಸಿದ್ದಿಯನ್ನು ಪಡೆದ ಸ್ಥಳ. ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ಎನ್ನುವ  ನಗರವಿದೆ. ಪ್ರಕೃತಿದತ್ತ ಶಾಂತ ಪರಿಸರದಲ್ಲಿ ಸುಂದರವಾದ ನಗರ ಇದಾಗಿದೆ. ಈ ನಗರದ 2ನೇ ಮುಖ್ಯ ರಸ್ತೆಯಲ್ಲಿ ನಗರದ ಮುಕುಟ ಮಣಿಯಂತೆ ಕಂಗೊಳಿಸುವ ಮಂದಿರವೇ ಭಗವಾನ್ ಪಾರ್ಶ್ವನಾಥ  ತೀರ್ಥಂಕರರ ತ್ರಿಕೂಟ ಚೂಡಾಮಣಿ ಜಿನಾಲಯ.

ದುರ್ಗಗಳ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿರುವ ಹೊಸದುರ್ಗ ವೈಭವ ಪಾರ್ಶ್ವನಾಥ ಸ್ವಾಮಿ ಜಿನಮಂದಿರ. ನಾಡಿನ ಬೃಹತ್ ಕನ್ನಡಿ ಜಿನಮಂದಿರವಾಗಿ  ರೂಪುಗೊಳ್ಳುತ್ತಿರುವ ಇಲ್ಲಿನ ಸೊಬಗನ್ನು ವೀಕ್ಷಿಸೋಣ ಬನ್ನಿ. ಮಂದಿರದ ಒಳ ಪ್ರವೇಶಿಸಿದೊಡನೆಯೇ ಒಂದು ರೀತಿಯ ಶಾಂತ ವಾತಾವರಣ ನೋಡಿ ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಒಂದು ಕ್ಷಣ ಈ ಮಂದಿರ ಕಟ್ಟಿಸಿದವರು ಯಾರು ಎಂದು ಕುತೂಹಲ ಮೂಡಿಸುವಷ್ಟು ಸುಂದರವಾಗಿದೆ. ಒಳಬಂದು ಎದುರಿಗೆ ಬಂದು ನೋಡಲಾಗಿ ಶ್ವೇತಶಿಲೆಯ ಭಗವಾನ್  ಶ್ರೀ ಪಾರ್ಶ್ವನಾಥ ಸ್ವಾಮಿ. ಇಲ್ಲಿ ಜೈನ ಸಿದ್ದಾಂತ ಶೃತ ಭಂಡಾರವೂ ಕೂಡ ಇದೆ. ಇಲ್ಲಿನ ಇತಿಹಾಸದ ಪ್ರಕಾರ ಉತ್ತರ ಭಾರತದಿಂದ ಬಂದು ಶ್ರವಣಬೆಳಗೊಳ ಬಾಹುಬಲಿ ಸ್ವಾಮಿ ದರ್ಶನಕ್ಕಾಗಿ  ಹೋಗುವ ಬಹುತೇಕ ಎಲ್ಲಾ ತ್ಯಾಗಿಗಳು ಇಲ್ಲಿಗೆ ಆಗಮಿಸಿ  ಕೆಲವು ದಿನ ವಾಸ್ತವ್ಯ ಮಾಡಿ  ಮುಂದೆ ವಿಹಾರ ಮಾಡುತ್ತಾರೆ. ಹಾಗೆ ಆಗಮಿಸಿದ ಸಂತರ ಪಾದಸ್ಪರ್ಶದಿಂದ  ಈ ಭೂಮಿ ಪವಿತ್ರವಾಗಿದೆ.  ಇಲ್ಲಿನ ಶ್ರಾವಕ ಶ್ರಾವಕಿಯರ  ಮನೆಗಳು ಪವಿತ್ರವಾಗಿವೆ. 19ನೇ ಶತಮಾನ ಮುಗಿದು 20 ನೇ ಶತಮಾನದ ಪ್ರಾರಂಭದ ಕಾಲ ಆಗ ಇಲ್ಲಿ ಕೇವಲ 20 ರಿಂದ 25 ಜನ ಕುಟುಂಬಗಳು ಮಾತ್ರ  ವಾಸಿಸುತ್ತಿದ್ದವು. ಜಿನದರ್ಶನಕ್ಕಾಗಿ ಧಾರ್ಮಿಕ ಕಾರ್ಯವಿದ್ದರೆ ಸಮೀಪದ ಜಾನುಕಲ್ಲು ಹಾಗೂ ಬೇರೇಜಿನಾಲಯಗಳಿಗೆ ಹೋಗಿಬರುತ್ತಿದ್ದರು. ಒಂದು ದಿವಸ ಇಲ್ಲಿನ ಹಿರಿಯರೆಲ್ಲರೂ ಕೂಡಿ ನಮ್ಮೂರಿನಲ್ಲಿ ನಾವೇ ಜಿನಾಲಯವನ್ನು ನಿರ್ಮಿಸಬೇಕೆಂದು ಚರ್ಚಿಸಿ ಒಮ್ಮತದಿಂದ ಮಂದಿರ ಕಟ್ಟಿಸಲು ಮುಂದಾಗುತ್ತಾರೆ. ಆಗ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ  ಸಣ್ಣ ಮಂದಿರ ಕಟ್ಟಿಸಲಾಗುತ್ತದೆ. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯನ್ನು ಒಳಗೊಂಡ 24 ತೀರ್ಥಂಕರರ ಖಡ್ಗಾಸನ ಮೂರ್ತಿಯನ್ನು ಹರಪ್ಪನಹಳ್ಳಿಯ ಜೈನ ಸಮುದಾಯದವರು ಭಕ್ತಿಯಿಂದ ನೀಡಿರುತ್ತಾರೆ. ಹೊಂಬುಜದ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ  1909 ರಲ್ಲಿ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯವು ಆಗಿನ ಸ್ಥಿತಿಗನುಗುಣವಾಗಿ ಜರುಗುತ್ತದೆ. ಮುಂದೆ ನಗರದ ಸ್ವರ್ಗೀಯ ಬ್ರಹ್ಮಯ್ಯನವರ ಪ್ರೇರಣೆಯಂತೆ  ಭಗವಾನ್ ಅನಂತನಾಥ ಸ್ವಾಮಿ ನೋಂಪಿ ಹಾಗೂ ಬೇರೆ ಬೇರೆ ನೋಂಪಿಯ ಆರಂಭವಾಗಿ ಇಂದಿಗೂ ನಡೆದುಬಂದಿದೆ. ಬರಬರುತ್ತಾ ಸಮಾಜದವರ ಸಂಖ್ಯೆ ಹೆಚ್ಚಾಗ ತೊಡಗಿತು. ಧಾರ್ಮಿಕ ಪರ್ವಗಳ ಆಚರಣೆಯ ಸಂದರ್ಭದಲ್ಲಿ ಸ್ಥಳದ ಕೊರತೆ ಉಂಟಾಯಿತು. ಆದರೂ ಅಗೂ ಹೀಗೂ 50 ವರ್ಷ  ಗತಿಸಿದವು. ನಂತರದ ದಿನಗಳಲ್ಲಿ ಇದೇ ಸ್ಥಳದಲ್ಲಿ ಸ್ವಲ್ಪ ವಿಶಾಲವೂ ಸುಂದರವಾದ  ಹೊಸಮಂದಿರ ಕಟ್ಟೋಣ ಎಂದು  ತೀರ್ಮಾನಿಸಲಾಯಿತು. ಚೈತ್ಯಾಲಯದ ನಿರ್ಮಾಣದ ಜವಾಬ್ದಾರಿಯನ್ನು ದಿವಂಗತ ಶ್ರೀ ಇಳಕಲ್ ಧರಣಪ್ಪ ರವರಿಗೂ ಮತ್ತು ದಿವಂಗತ ಶ್ರೀ ಪ್ರಥಮ ಶೆಟ್ಟಿ ತವಣಪ್ಪ ನವರಿಗೂ ವಹಿಸಿಕೊಡಲಾಯಿತು. ಇದರ ಜೊತೆಗೆ ಬರಗಾಲಿ ಬ್ರಹ್ಮರಾಜಪ್ಪ ಬಾಗಲಕೋಟೆ ವಜ್ರನಾಭಯ್ಯ ಹೆಚ್.ಕೆ ಭೂಪಾಲಪ್ಪ, ಎಂ.ಡಿ ರಾಜಪ್ಪ , ಎಂ.ವಿ ವಾಸುಪೂಜ್ಯಪ್ಪ, ಹೆಚ್.ಡಿ ಶಾಮರಾಜಪ್ಪ ,ಪ್ರಥಮಶೆಟ್ಟಿ ಹೊಂಬಣ್ಣ, ಇಜಾರೆ ಧನ್ಯ ಕುಮಾರಪ್ಪ, ಸದರಿ ನಾಗರಾಜಪ್ಪ , ಗೋಗಿ  ವಾಸಪ್ಪ , ದಂಡಾವತಿ ವಜ್ರಪ್ಪ , ಭೂಪಾಲಪ್ಪ ಮುಂತಾದವರು  ಸಹಕರಿಸಿ ಈಗ ಇರುವ ಭವ್ಯ ಸುಂದರ ಜಿನಾಲಯವನ್ನು ಸ್ಥಳ ಪರಸ್ಥಳದ ಜನರ ಆರ್ಥಿಕ ಸಹಕಾರದೊಂದಿಗೆ  ನಿರ್ಮಾಣ ಮಾಡಿ ಪಂಚಕಲ್ಯಾಣ ಮಾಡಲು ನಿರ್ಧರಿಸಲಾಯಿತು. ಮಂದಿರ ಪೂರ್ಣಗೊಂಡ ನಂತರ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ  ದಿನಾಂಕ 19/04/1969 ರಿಂದ 025/04/1969 ರವರೆಗೆ  ಬಹಳ ಭಕ್ತಿಯಿಂದಲು ಬಹಳ ವೈಭವದಿಂದಲೂ  ನೂತನ ಜಿನಬಿಂಬದ ಪಂಚಕಲ್ಯಾಣವು ನೆರವೇರಿತು. ಇದರ  ನೇತೃತ್ವವನ್ನು ಶ್ರೀ ಎಂ.ಸಿ ಅನಂತರಾಜಯ್ಯ ನವರು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಎಂ.ಸಿ ಅನಂತರಾಜಯ್ಯರವರಿಗೆ ಸಹಕರಿಸಿದ ಕುಣಿಗಲ್ ಆದಣ್ಣ, ಬೆಳ್ಳೂರು ಜೀವಣ್ಣ ದಾನಿಗಳನ್ನು ಬಿರ್ಚೂಡು  ನಾಗಕುಮಾರಪ್ಪ ಕಾರ್ಯಕರ್ತರುಗಳನ್ನು ಹಾಗೂ ಪುರೋಹಿತರುಗಳನ್ನು ಇಲ್ಲಿ ಸನ್ಮಾನಿಸಲಾಯಿತು.

ಶ್ರೀ ಎಂ.ಸಿ ಅನಂತರಾಜಯ್ಯ ನವರ ಅಭಿಪ್ರಾಯದಂತೆ  2ನೇ ಮೇಲಂತಸ್ತಿನಲ್ಲಿ ಬಾಹುಬಲಿಯ ಸ್ವಾಮಿಯ ಬಿಂಬವನ್ನು ಸ್ಥಾಪಿಸಬೇಕೆಂದು ನಿರ್ಧರಿಸಿ ತಕ್ಷಣ ಜಯಪುರದಿಂದ ಮೂರ್ತಿಯನ್ನು ತರಸಿಯೇಬಿಟ್ಟರು. 5ನೇ ವಾರ್ಷಿಕ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಆಹ್ವಾನಿಸಿ ಅವರ ಅಮೃತ ಹಸ್ತದಿಂದ  ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪೂಜ್ಯ ಹೆಗ್ಗಡೆಯವರು ಈ ಬಸದಿಗೆ ನೂತನವಾಗಿ ತ್ರಿಕೂಡ ಚೂಡಾಮಣಿ ಜಿನಮಂದಿರವೆಂದು ಹಸರಿಟ್ಟರು.  ಅಲ್ಲಿಂದ ಇಲ್ಲಿಯವರೆಗೂ  ಜಿನ ಸಮುದಾಯಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿ ಎಲ್ಲಾ ಶ್ರಾವಕ ಶ್ರಾವಕಿಯರು ಸೇವೆ ಸಲ್ಲಿಸುತ್ತಿದ್ದಾರೆ.