ಜೈ ಜಿನೇಂದ್ರ ವೀಕ್ಷಕರೆ, ಕರ್ನಾಟಕದಲ್ಲಿಯೆ ಅತ್ಯಂತ ಪ್ರಾಚೀನ ಪುರಾತನ ಪ್ರಸಿದ್ದ ಬಸದಿಗಳಲ್ಲಿ ಹೆಗ್ಗೆರೆ ಬಸದಿ ಒಂದು. ಭವ್ಯ ಇತಿಹಾಸ ಹಿನ್ನೆಲೆಯುಳ್ಳ ಹಾಗೂ ಶ್ರೇಷ್ಟ ಹೊಯ್ಸಳ ಶಿಲ್ಪ ಕಲೆಯನ್ನು ಸೂರೆಗೊಂಡಿರುವ ಶ್ರೀ 1008 ಸುಪಾರ್ಶ್ವನಾಥ ಬಸದಿಯು ಅತ್ಯಂತ ಕಲಾತ್ಮಕವಾಗಿದ್ದು ಬಸದಿಯ ಒಳಭಾಗದ ರಚನಾ ವಿನ್ಯಾಸಕ್ಕಿಂತ ಹೊರವಿನ್ಯಾಸವು ಅತ್ಯಂತ ವಿಭಿನ್ನವಾಗಿದೆ. ಮೇಲ್ನೋಟ್ಟಕ್ಕೆ ಬಸದಿಯು ನಕ್ಷತ್ರಾಕರದ ವಿನ್ಯಾಸವನ್ನು ಹೊಂದಿರುವುದನ್ನು ಇಲ್ಲಿ ಗಮನಿಸ ಬಹುದು ಆದರೆ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳಿಗೆ ಇರುವಂತೆ ಇದಕ್ಕೆ ನಕ್ಷತ್ರಾಕಾರದ ಜಗುಲಿ ಇಲ್ಲ. ಬಸದಿಯು ಒಟ್ಟು 500ಕ್ಕೂ ಹೆಚ್ಚು ಸಂಖ್ಯೆಯ ಕಮಲಗಳ ಕೆತ್ತನೆಯಿಂದ ಅಲಂಕೃತಗೊಂಡಿದೆ. ಬಸದಿಯ ಮೇಲ್ಭಾಗದಲು ಕೂಡ ಸುತ್ತಲು ಹೊರಚಾಚಿರುವ ಕಲಾತ್ಮಕ ಚಾವಣಿಯ ಅಂಚು ಬಸದಿಯ ಸಿರಿಮುಡಿತಂತಿದೆ. ಬಸದಿಯ ಮುಂಭಾಗದಲ್ಲಿ ಮೂರು ಮಜಲುಗಳುಳ್ಳ ಮುಖ್ಯ ದ್ವಾರವು ಆಕರ್ಷಕ ಹೊಸ್ತಿಲನ್ನು ಹೊಂದಿದೆ. ದ್ವಾರದ ಮೇಲ್ಭಾಗದಲ್ಲಿ ಬಿಂಬವಿದೆ. ಬಸದಿಗೆ ಶಿಕರವಾಗಲಿ ಮಾನಸ್ತಂಭವಾಗಲಿ ಇಲ್ಲಾ, ಅವು ಮೊದಲು ಇದ್ದು ಅನಂತರದ ಕಾಲಕ್ಕೆ ಹಾಳಾಗಿದಿರಬಹುದು ಎನ್ನುವ ಅಭಿಪ್ರಾಯ. ಬಸದಿಯ ಮುಂದೆ ಬೃಹತ್ತಾದ ಶಾಸನ ಹಾಗೂ ನಿಶಿವಿಶಾಸನಗಳನ್ನು ಕಿರುಮಂಟಪದ ಅಡಿ ಸಂರಕ್ಷಿಸಲಾಗಿದೆ. ಬಸದಿಯ ಸುತ್ತ ವಿಶಾಲವಾದ ಪ್ರಾಕಾರ ಬಲಗಡೆ ಕಲ್ಲು ಬಾವಿ ಇದೆ. ಹೆಗ್ಗೆರೆ ಶಿಲ್ಪಕಾಲ ಸಂಪತ್ತಿನ ಈ ಬಸದಿಯನ್ನು ಶಾಸನಗಳಲ್ಲಿ ಚನ್ನಪಾರ್ಶ್ವನಾಥ ದೇವರ ಬಸದಿ ಎಂದು ಕರೆಯಲಾಗಿದೆ. ಬಸದಿಯನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದ್ದು ಗರ್ಭಗೃಹ ಸುಕನಾಸಿ ನವರಂಗಗಳನ್ನು ಹೊಂದಿರುವ ಈ ಅದ್ಭುತ ಮಾದರಿ ಬಸದಿ ಇಡಿ ರಾಜ್ಯದಲ್ಲಿ ಅಪರೂಪದ್ದಾಗಿದೆ.
ಇನ್ನೂ ಬಸದಿಯ ಒಳರಚನೆಯನ್ನು ನೋಡುವುದಾದರೆ ಗರ್ಭಗೃಹದಲ್ಲಿ ಹೊಯ್ಸಳ ಶಿಲ್ಪದ ಉತ್ತಮ ನಿದರ್ಶನವಾದ ದೊಡ್ಡ ಕಮಲ ಪೀಠ ಇದೆ. ಇದರ ಮೇಲಿನ ಜಿನ ಮೂರ್ತಿ ಈಗ ಇಲ್ಲ. ಈ ಪೀಠದ ಮೇಲೆ ತದನಂತರದ ಕಾಲದ 7ನೇ ತೀರ್ಥಂಕರರಾದ ಶ್ರೀ ಸುಪಾರ್ಶ್ವನಾಥ ಸ್ವಾಮಿ ವಿಗ್ರಹವಿದೆ. ಕ್ರಿ.ಶ 1942ರಲ್ಲಿ ಪಾಯ ಸಾಗರ ಮುನಿ ಮಹಾರಾಜರು ಹೆಗ್ಗೆರೆ ಬಸದಿಯಲ್ಲಿ ಶ್ರೀ 1008 ಸುಪಾರ್ಶ್ವನಾಥ ಸ್ವಾಮಿಯವರ ವಿಗ್ರಹವನ್ನು ಸ್ಥಾಪಿಸಿರುತ್ತಾರೆ. ಹಾಗೂ ಇಲ್ಲಿರುವ ಬ್ರಹ್ಮ ಯಕ್ಷ ದೇವರು ಮತ್ತು ಪದ್ಮಾವತಿ ಯಕ್ಷೇಯ ವಿಗ್ರಹಗಳು ಮೊದಲಿನವು ಎನ್ನಲಾಗಿದೆ. ಬ್ರಹ್ಮ ದೇವರ ಲೋಹದ ಉತ್ಸವ ಮೂರ್ತಿಯನ್ನು ದಶಕದ ಹಿಂದೆ ಮಾಡಿಸಲಾಗಿದೆ. ಸುಕನಾಸಿಯಲ್ಲಿ ನಾಟ್ಯ ಭಂಗಿಯಲ್ಲಿರುವ ಪದ್ಮಾವತಿ ಯಕ್ಷೇಯ ಅಪರೂಪವಾದ ಶಿಲಾಕೃತಿ ಮತ್ತು ಉತ್ಸವ ಮೂರ್ತಿ ಇವೆ. ಸುಕನಾಸಿಯ ದ್ವಾರದ ಮೇಲ್ಭಾಗದಲ್ಲಿ ಹಾಗೂ ಮಗ್ಗಿಲುಗಳಲ್ಲಿ 254 ರಂಧ್ರಗಳುಳ್ಳ ಅತ್ಯಾಕರ್ಷಕ ಶಿಲಾ ಜಾಲಾಂದ್ರವನ್ನು ಕೆತ್ತಲಾಗಿದೆ. ನವರಂಗದಲ್ಲಿ ಒಟ್ಟು 16 ಶಿಲಾ ಸ್ತಂಭಗಳಿದ್ದು ಅತ್ಯಂತ ಸೊಬಗಿನಿಂದ ಕೂಡಿವೆ. ಇವುಗಳಲ್ಲಿ 12 ಸ್ತಂಭಗಳು ಬಸದಿಯ ಕಟ್ಟಡದ ಬಿತ್ತಿಗೆಗೆ ಹೊಂದಿಕೊಂಡಿದ್ದು ಭಾಗಶಃ ಒಳ ಸೇರಿದ್ದು ಮೋಡದಿಂದ ಇಣುಕುವ ಚಂದ್ರನಂತೆ ಶೋಭಿಸುತ್ತಿವೆ. ಈ 12 ಸ್ತಂಭಗಳು ವಿಭಿನ್ಯ ವಿನ್ಯಾಸಗಳಿಂದ ಕೂಡಿವೆ. ಮೇಲ್ಛಾವಣಿಯ 9 ಅಂಕಗಳಲ್ಲಿ ಬಿಡಿಸಲಾಗಿರುವ ಕಮಲ ಪುಷ್ಪಗಳು ವರ್ಣಿಸಲಸಾಧ್ಯ ಶೋಭೆಯನ್ನು ತಂದಿವೆ.
ಬಸದಿಯಲ್ಲಿರುವ ಶ್ರೀ 1008 ಸುಪಾರ್ಶ್ವನಾಥ ಸ್ವಾಮಿಯ ಹಾಗೂ ಶ್ರೀ ಬ್ರಹ್ಮ ಯಕ್ಷ ದೇವರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈ ಚೈತ್ಯಾಲಯದ ಟ್ರಸ್ಟ್ ನವರು ನಡೆಸುತ್ತಾ ಬಂದಿದ್ದಾರೆ. ನೆರೆ ಹೊರೆಯ ಜಿಲ್ಲೆಗಳಿಂದಲು ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತ ಬಂದಿದ್ದು, ಈ ಸಂದರ್ಭದಲ್ಲಿ ಶ್ರೀ ಸುಪಾರ್ಶ್ವನಾಥ ಸ್ವಾಮಿಯವರ ಉತ್ಸವ ಸಹಿತ ಸುಮಂಗಲಿಯರಿಂದ ಜಲಾ ಯಾತ್ರೆ ಉತ್ಸವ, ಧಾರ್ಮಿಕ ಸಭೆ, 108 ಕಳಶಗಳಿಂದ ಮಹಾಭಿಷೇಕ ಇತ್ಯಾದಿ ಕಾರ್ಯ ವಿಧಿ ವಿಧಾನಗಳು ಜರುಗುತ್ತವೆ. 1985ರಿಂದಲು ಈ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ.
ಹೆಗ್ಗೆರೆ ಗ್ರಾಮದ ಶ್ರೀ 1008 ಸುಪಾರ್ಶ್ವನಾಥ ಬಸದಿಯನ್ನು ಕುರಿತು ಅಲ್ಲಿನ ಸಮಾಜದವರು ಜ್ವಾಲಮಾಲ ಡಾಟ್ ನ್ಯೂಸ್ ನೊಂದಿಗೆ ಅವರ ಅನಿಸಿಕೆಗಳನ್ನು ಹಂಚಿಕೊಂಡರು.
ಇಂತಹ ಒಂದು ಕಲಾತ್ಮಕ ಬಸದಿಯ ದರ್ಶನ ತಾವೆಲ್ಲರೂ ಒಮ್ಮೆ ಖಂಡಿತ ಪಡೆಯಿರಿ ಎಂದು ಹೇಳುತ್ತ ಮುಂದಿನ ಕ್ಷೇತ್ರ ಪರಿಚಯದೊಂದಿಗೆ ಮತ್ತೆ ನಿಮ್ಮನ್ನು ಭೇಟಿಯಾಗಲ್ಲಿದ್ದೇನೆ.
ಈ ಕ್ಷೇತ್ರಪರಿಚಯದ ಪ್ರಾಯೋಜಕರು ಶ್ರೀಯುತರಾದ ಹಿಜಾರಿ ಹೆಚ್ ಪಿ ಧನಪಾಲ್, ಶ್ರೀಮತಿ ಸುಮಾ ಹಿಜಾರಿ ಹಾಗೂ ಹೆಚ್ ಡಿ ಅನುಶ್ ಕುಮಾರ್, ರೇಷ್ಮ ಮತ್ತು ಚಿರಂಜಿವಿ ವಿರಾಜ್ ಜೈನ್.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














