ಎತ್ತ ನೋಡಿದರೂ ಬೆಟ್ಟಗಳ ಸಾಲು ಸುತ್ತಲೂ ದೇವಸ್ಥಾನಗಳು ಸುಂದರ ರಮಣೀಯ ಪ್ರಕೃತಿಯ ಮಡಿಲಲ್ಲಿ ವಿರಾಜಮಾನರಾಗಿದ್ದಾರೆ ನಿಡಗಲ್ ಶ್ರೀ ಪಾರ್ಶ್ವನಾಥ ಸ್ವಾಮಿ . ಇಲ್ಲಿ ಆರಾಧ್ಯ ದೇವತೆ ಪದ್ಮಾವತಿ ಮಾತೆ.
ಪಾವಗಡ ತಾಲ್ಲೂಕಿನ ನಿಡಗಲ್ ಬೆಟ್ಟದ ಜಿನಾಲಯ ವನ್ನು ಪರಿಚಯಿಸಲಾಗಿದೆ. ಮನಮೋಹಕ ಪರಿಸರ ದಲ್ಲಿನ ಬಸದಿ ಹಾಗೂ ರೇವತಿ ಪದ್ಮರಾಜ್ ಹಾಡುವಳ್ಳಿ ಇವರ ಸಾಹಿತ್ಯ ವನ್ನು ತಮ್ಮ ಮಧುರ ಕಂಠದಲ್ಲಿ ಹಾಡಿರುವ ಪೂಜ್ಯ ಮೋಹನ್ ರವರ ಹಾಡಿನೊಂದಿಗೆ ದರ್ಶನ ಪಡೆಯಿರಿ.
ಐತಿಹಾಸಿಕವಾದ ನಿಡಗಲ್ ದುರ್ಗಾ ಎಂದು ಕರೆಸಿಕೊಳ್ಳುವ ರಾಜ್ಯ ಮನೆತನಗಳಿಂದ ಪಾಳೇಗಾರರಿಂದ ಮೆರೆದ ಶೌರ್ಯ ಭೂಮಿ. ನಿಡಗಲ್ ಬೆಟ್ಟ. ಈ ಬೆಟ್ಟ ಪ್ರಕೃತಿ ನಿರ್ಮಿತ ಸುಂದರ ಪರಿಸರದ ಬಳಿ ಕೋಟೆ ಕಟ್ಟಲೆಗಳ ನಡುವೆ ಇಲ್ಲಿರುವ ಸುಂದರ ದೇವಾಲಯಗಳ ನಡುವೆ ಒಂದು ಬಸದಿ ಕೂಡ ಎದ್ದು ಕಾಣುತ್ತದೆ. ಇಲ್ಲಿ ಭೇಟಿ ನೀಡಿದವರಿಗೆ ಉಲ್ಲಾಸ ದಾಯಕ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ನಿಡಗಲ್ ಬೆಟ್ಟವು ತುಮಕೂರು ಜಿಲ್ಲೆಯ ಪಾವಗಡದಿಂದ ಚಳ್ಳಕೆರೆ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ರಂಗಸಮುದ್ರಕ್ಕೆ 24 ಕಿಲೋಮೀಟರ್ ದೂರವಿದ್ದು ಅಲ್ಲಿಂದ ಎಡಕ್ಕೆ ನಿಡಗಲ್ ಬೆಟ್ಟಕ್ಕೆ 9 ಕಿಲೋಮೀಟರ್ ದೂರದಲ್ಲಿದೆ .
1986 ರಲ್ಲಿ ಸ್ವಸ್ಥಿ ಶ್ರೀ ಧರ್ಮಭೂಷಣ ಮುನಿಮಹಾರಾಜರು ನಿಡಗಲ್ ನಲ್ಲಿ ವಿಹಾರ ಮಾಡುತ್ತಿದ್ದಾಗ ಈ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಸದಿಯನ್ನು ದಾನಿಗಳಿಂದ ಧನಸಹಾಯ ಪಡೆದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜೀರ್ಣೋದ್ದಾರಗೊಳಿಸಲಾಯಿತು. 1998ರಲ್ಲಿ ಪರಮಪೂಜ್ಯ ಕ್ಷುಲ್ಲಕ 105 ಕಾಂಚನಶ್ರೀ ಮಾತಾಜಿಯವರು ಈ ಬಸದಿಗೆ ದರ್ಶನಕ್ಕೆ ಬಂದಾಗ ಸಮಾಧಿ ಸಾಮ್ರಾಟ್ ಆಚಾರ್ಯ 108 ಶ್ರೀ ವಿಮಲ್ ಸಾಗರ್ ಮುನಿಮಹಾರಾಜ್ ಸ್ವಪ್ನದಲ್ಲಿ ಬಂದ ಸೂಚನೆಯಂತೆ ಕಷ್ಟಹರ ಪಾರ್ಶ್ವನಾಥ ಸ್ವಾಮಿ ಎಂದು ನಾಮಕರಣ ಮಾಡಿ ಷೋಷಿಸಿದರು. 2009 ರಲ್ಲಿ ಹೊಂಬುಜದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ರು ಮಹಾ ಮಾತೆ ಶ್ರೀ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಿದ್ದರು. 2017 ರ ಮೇ ತಿಂಗಳಿನಲ್ಲಿ ಸಿಂಹನಗದ್ದೆ ಶ್ರೀ ಬಸ್ತಿ ಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕಾ ಪಟ್ಟಾಚರ್ಯವರ್ಯ ಸ್ವಾಮಿಗಳು ಕಷ್ಟಹರಣ ಪಾರ್ಶ್ವನಾಥ ಸ್ವಾಮಿಯ ಪ್ರಾಚೀನ ಬಿಂಬಕ್ಕೆ ವಜ್ರ ಲೇಪನ ಪುನರ್ ಪ್ರತಿಷ್ಠೆ ಹಾಗೂ 13 ಇಂಚಿನ ನೂತನ ಪದ್ಮಾಸನ ಪಾರ್ಶ್ವನಾಥ ಜಿನಬಿಂಬ ಮತ್ತು ಕ್ಷೇತ್ರಪಾಲ ಪ್ರಭುದೇವರ ಬಿಂಬ ವನ್ನು ಪ್ರತಿಷ್ಠಾಪಿಸಿ ಪಂಚಕಲ್ಯಾಣದೊಂದಿಗೆ ಅತ್ಯಂತ ವೈಭವದಿಂದ ನೆರವೇರಿಸಲಾಯಿತು.
ಈ ಬಸದಿಗೆ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಾ ವಿರಾಜಮಾನರಾಗಿರುವ ಮೂಲ ಮೂರ್ತಿ ಭಗವಾನ್ 1008 ಶ್ರೀ ಕಷ್ಟಹರಣ ಪಾರ್ಶ್ವನಾಥ ಸ್ವಾಮಿ 5 ಅಡಿ ಎತ್ತರವಿದೆ. ಮಾತೆ ಪದ್ವಮಾವತಿ ದೇವಿಯು ಇಲ್ಲಿ ಇಷ್ಟಾರ್ಥ ಸಿದ್ದಿಯಾಗಿದ್ದಾಳೆ.
ಪ್ರತಿವರ್ಷವೂ ಇಲ್ಲಿ ವಾರ್ಷಿಕ ಪೂಜೆಯು ವಿಶೇಷ ಪೂಜೆ ಅಲಂಕಾರದೊಂದಿಗೆ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ಬಾರಿಯೂ ಕೂಡ ದಿನಾಂಕ 9/1/2022 ರಂದು ವಾರ್ಷಿಕ ಪೂಜೆ ನಿಗದಿಯಾಗಿದ್ದು ಧರ್ಮ ಬಂಧುಗಳು ಭಾಗವಹಿಸಿ ಪುಣ್ಯಭಾಗಿಗಳಾಗಿ. 1008 ಭಗವಾನ್ ಶ್ರೀ ಕಷ್ಟಹರಣ ಪಾರ್ಶ್ವನಾಥ ಸ್ವಾಮೀಜಿ ಯವರ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಈ ಸ್ಥಳಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಸದಿಯ ಅಭಿವೃದ್ದಿಗೆ ಕಾರಣವಾಗಬೇಕೆಂದು ಮನವಿ ಮಾಡಿದ್ದಾರೆ.














