ಸಾಪ್ತಾಹಿಕ ಜೈನ್ ನ್ಯೂಸ್- 57 / 27-11-2021 / jwalamalanews / 2021

ಜೈ ಜಿನೇಂದ್ರ ವೀಕ್ಷಕರೆ, ವಾರದ ಜೈನಸುದ್ದಿಗಳಿಗೆ ನಿಮಗೆಲ್ಲ ಸ್ವಾಗತಿಸುತ್ತ ಮುಖ್ಯಾಂಶಗಳನ್ನು ನೋಡಿ ಬರೋಣ.

ಮುಖ್ಯಾಂಶಗಳು

ಆಚಾರ್ಯ ಶ್ರೀ ವಿದ್ಯಾಸಾಗರಜಿ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ.

ಹೊಂಬುಜ ಮಹಾಸ್ವಾಮೀಜಿಯವರ ದಶವರ್ಷದ ವಾರ್ಷಿಕ ಪಟ್ಟಾಭಿಷೇಕದ ವರ್ಧಂತ್ಯೋತ್ಸವ.

ವಿಂಗ್ ಕಮಾಂಡರ್, ಈಗ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ ಜೈನ್ ಅವರಿಗೆ ವೀರ ಚಕ್ರವನ್ನು ಪ್ರದಾನ ಮಾಡಿದರು.

ಕುಣಿಗಲ್ ನಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮ.

ರತ್ನತ್ರಯ ಜೈನ್ ಮಿಲನ್ ವಿಲ್ಸನ್ ಗಾರ್ಡನ್ ಶಾಖೆಯ ನವೆಂಬರ್ ತಿಂಗಳ ಮಾಸಿಕ ಸಭೆ.

ಶ್ರೀ ಅರಿಹಂತ ಸೌಹಾರ್ದ ಸಹಕಾರಿ ಬ್ಯಾಂಕ್ 31 ನೇ ವಾರ್ಷಿಕ ಸಮ್ಮೇಳನ.

ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ ನಡೆದ ಅಡ್ಡ ಪಲ್ಲಕಿ ಉತ್ಸವ, ಲಕ್ಷದಿಪೋತ್ಸವ.

ಸ್ವಾದಿ ದಿಗಂಬರ ಜೈನ ಮಠದಲ್ಲಿ ಮಹಾವೀರ ಸ್ವಾಮಿ ಹಾಗೂ ನವಗ್ರಹ ತೀರ್ಥಂಕರರಿಗೆ ಅಭಿಷೇಕ ಮತ್ತು ಗುರುಗ್ರಹ ಶಾಂತಿ ಹವನ ಪೂಜೆ.

ಭಾರತವರ್ಷ ದಿಗಂಬರ ತೀರ್ಥಕ್ಷೇತ್ರ ಕಮಿಟಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ.

ಹೊರರಾಜ್ಯದ ಸುದ್ದಿಗಳಲ್ಲಿ ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ ಆರೋಗ್ಯ ಚಿಕಿತ್ಸಾ ಶಿಬಿರ.

ಸುದ್ದಿಗಳ ವಿವರ.

ಬೆಂಗಳೂರಿನ ಸಕಲ ಜೈನ ಸಮಾಜದ ವತಿಯಿಂದ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರ ಭಾವಚಿತ್ರವುಳ್ಳ ಅಂಚೆ ಲಕೋಟೆಯನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರಿಂದ ಬಿಡುಗಡೆಗೊಳಿಸಲಾಯಿತು.

ಬೆಂಗಳೂರಿನ ಜಿ ಪಿ ಓ ನಲ್ಲಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ಆಚಾರ್ಯ ಪದವಿ ಪಡೆದು 50 ವರ್ಷ ಕಳೆದ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಸಕಲ ಜೈನ ಸಮಾಜದ ವತಿಯಿಂದ ಭಾವಚಿತ್ರವುಳ್ಳ ವಿಶೇಷ ಅಂಚೆ ಲಕೋಟೆಯನ್ನು ಧರ್ಮಸ್ಥಳ ಶ್ರೀ ಡಿ ಸುರೇಂದ್ರ ಕುಮಾರ್ ರವರು ಮತ್ತು ಬೆಂಗಳೂರು ಪೋಸ್ಟರ್ ನಿರ್ದೇಶಕರಾದ ಎಂ ಬಿ ಘಜಬಿ ಅವರು ಬಿಡುಗಡೆಮಾಡಿ ಆಚಾರ್ಯರಿಗೆ ಗೌರವ ಸಲ್ಲಿಸಿದರು. ಈ ಅಂಚೆ ಲಕೋಟೆಯಲ್ಲಿ ಮಯೂರ ಪಿಂಚಿ ಕಮಂಡಲದಾರಿ ದಿಗಂಬರ ಆಚಾರ್ಯ ವಿಧ್ಯಾಸಾಗರರು ವಿರಾಜಮಾನರಾಗಿದ್ದಾರೆ.

ಅತಿಶಯ ಕ್ಷೇತ್ರ ಹೊಂಬುಜದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ 10 ನೇ ವರ್ಷದ ವರ್ಧಂತ್ಯೋತ್ಸವ ಮಹೋತ್ಸವದ ಸುಂದರ ಕ್ಷಣಗಳು.

ಅತಿಶಯ ಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ 10 ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕದ ವರ್ದಂತೋತ್ಸವ ಮಹೋತ್ಸವದ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿತು. ಪೂಜ್ಯರ ಪೀಠಾರೋಹಣದ ಮುಂಚೆ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಹಾಗೂ ಮಹಾಮಾತೆ ಪದ್ಮಾವತಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಪೂಜ್ಯರ ಮಹೋನ್ನತ ಕೆಲಸ ಕಾರ್ಯ ಗಳಿಂದ ಹೊಂಬುಜ ಕ್ಷೇತ್ರವು ಇನ್ನಷ್ಟು ಮಗದಷ್ಟು ಜಿನ ಧರ್ಮದ ಪ್ರಭಾವಗೈಯುತ್ತ ಜಗತ್ ವಿಖ್ಯಾತವಾಗಲಿ ಜೈನ ಸಮಾಜಕ್ಕೆ ಆಶ್ರಯವಾಗಿ ಕ್ಷೇತ್ರವು ಜೈನ ಧರ್ಮದ ಹಿರಿಮೆ ಗರಿಮೆಗೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತ ಪೂಜ್ಯ ಸ್ವಾಮೀಜಿಯವರು ಭೌವ್ಯ ಜೀವಿಗಳಿಗೆ ಆಸರೆಯ ಆಶೀರ್ವಚನವನ್ನು ದಯಪಾಲಿಸುತ್ತ ವಿರಾಜಮಾನರಾಗಿರಲಿ ಎಂದು ಎಲ್ಲರು ಶುಭಾ ಹಾರೈಸಿದರು.

ವಿಂಗ್ ಕಮಾಂಡರ್, ಈಗ ಗ್ರೂಪ್ ಕಮಾಂಡರ್ ಅಭಿನಂದನ್ ವರ್ಧಮಾನ ಜೈನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇವರಿಂದ ವೀರ ಚಕ್ರ ಪ್ರಶಸ್ತಿ ಪ್ರದಾನ.

ಹೊಂಬುಜ ಶ್ರೀಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಲಕ್ಷದೀಪೋತ್ಸವದ ರಮಣಿಯ ದೃಷ್ಯಾವಳಿಗಳು ನಿಮಗಾಗಿ.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವ ಹಾಗೂ ಅವರ ಸಾನಿಧ್ಯದಲ್ಲಿ ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ 24-11-2021 ರಂದು ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾ ಮಾತೆ ಪದ್ಮಾವತಿ ದೇವಿಗೆ ಶೋಡಶೋಪಚಾರ ಪೂಜೆ, ಅಡ್ಡ ಪಲ್ಲಕಿ ಉತ್ಸವ, ಲಕ್ಷದಿಪೋತ್ಸವವನ್ನು ಎಲ್ಲಾ ಶ‍್ರಾವಕ ಶ್ರಾವಕಿಯರು ಭಕ್ತಿ ಭಾವದಿಂದ ನೆರವೇರಿಸಿದರು.

ಜಾಹೀರಾತು

ಶ್ರೀ ಅರಿಹಂತ ಉದ್ಯೋಗ ಸಮೂಹ ಬೋರಗಾವ, ಇದರ 31 ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಬೋರಗಾವ  ಗ್ರಾಮದಲ್ಲಿ ಶ್ರೀ ಅರಿಹಂತ ಉದ್ಯೋಗ ಸಮೂಹದ, ಶ್ರೀ ಅರಿಹಂತ ಸೌಹಾರ್ದ ಸಹಕಾರಿ ಬ್ಯಾಂಕ್ ಬೋರಗಾವ ಮುಖ್ಯ ಶಾಖೆಯಲ್ಲಿ 31 ನೇ ವಾರ್ಷಿಕ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಬೆಡಕಿಹಳಾ ಗ್ರಾಮದ ಶ್ರೀ ವರ್ಧಮಾನ ಜಯಪಾಲ ಪಾಟೀಲ್ ಪರಸಪ್ಪಗೊಳ ಇವರಿಗೆ ಬೆಸ್ಟ ಬ್ಯಾಂಕ್ ಮ್ಯಾನೆಜರ್ ಎಂದು ಗೌರವಿಸಿದರು.

ಸ್ವಾದಿ ದಿಗಂಬರ ಜೈನ ಮಠದಲ್ಲಿ ಮಹಾವೀರ ಸ್ವಾಮಿ ಹಾಗೂ ನವಗ್ರಹ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮತ್ತು ಗುರುಗ್ರಹ ಶಾಂತಿ ಹೋಮ ಹವನ ವಿಧಿ ಪೂರ್ವಕವಾಗಿ ನಡೆಯಿತು.

ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ ಸ್ವಸ್ತಿ ಶ್ರೀ ಜಗದ್ಗುರು ಅಕಲಂಕ ಕೇಸರಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಗುರುವಾರ ದಿವಸ ಪುಷ್ಯ ನಕ್ಷತ್ರ ಇದ್ದರಿಂದ ಗುರು ಪುಷ್ಯಯಾಮೃತ ಯೋಗವಿದ್ದ ಕಾರಣ ಸುವರ್ಣ ಮಹಾವೀರ ಸ್ವಾಮಿ ಹಾಗೂ ನವಗ್ರಹ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮತ್ತು ಗುರುಗ್ರಹ ಶಾಂತಿ ಹವನ ಪೂಜೆ ನೆರವೇರಿಸಲಾಯಿತು.

ರತ್ನತ್ರಯ ಜೈನ್ ಮಿಲನ್ ವಿಲ್ಸನ್ ಗಾರ್ಡನ್, ಇಲ್ಲಿ ನಡೆದ ನವೆಂಬರ್ ತಿಂಗಳ ಮಾಸಿಕ ಸಭೆಯ ಸುದ್ದಿ ವಿವರ ಇಲ್ಲಿದೆ.

ರತ್ನತ್ರಯ ಜೈನ್ ಮಿಲನ್ ವಿಲ್ಸನ್ ಗಾರ್ಡನ್ ಶಾಖೆಯ ನವೆಂಬರ್ ತಿಂಗಳ ಮಾಸಿಕ ಸಭೆಯು ದಿನಾಂಕ 20-11-2021 ರಂದು ರತ್ನತ್ರಯ ಜೈನ್ ಮಿಲನ್ ವಿಲ್ಸನ್ ಗಾರ್ಡನ್ ಶಾಖೆಯಲ್ಲಿ ನಡೆದಿದ್ದು ಅಧ್ಯಕ್ಷರಾದ ಡಾ|| ನವೀನ್ ಕುಮಾರ್ ಜಿ ಎನ್ ಗುಬ್ಬಿಯವರು ಸ್ವಾಗತಿಸಿದರು. ಮಂತ್ರ ಮತ್ತು ಚತ್ತಾರಿ ಮಂಗಳಂ ಹೇಳಿದರು. ರಾಣಿ ಪ್ರಫೂಲ್ಹಾ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು, ಬ್ರಹ್ಮಿಲಾ ಅವರು ಪ್ರಾರ್ಥಿಸಿದರು. ಅಭಿಷೇಕ್ ಮೋಹನ್ ಕುಮಾರ್ ಅವರು ಜೈನ್ ಮಿಲನ್ ಉದ್ದೇಶಗಳನ್ನು ತಿಳಿಸಿದರು. ಸಂವೇದ್ ಜೈನ್ ನಡಾವಳಿ ಓದಿದರು. ಬೇಪಿನ್ ಸತೀಶ್ ಕುಮಾರ್ ಅವರು ವರದಿ ಮಂಡನೆ ಮಾಡಿದರು. ಇನ್ನೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ|| ಎಸ್ ಬಿ ಸುಜಾತ ಅವರು ಶ್ರೀ ಪಂಚಮಿ ನೋಂಪಿಯ ಕಥೆ ವಿಷಯಗಳನ್ನು ಉಪನ್ಯಾಸ ನೀಡಿದರು. ಆಚರಿಸುವ ಪ್ರತಿ ನೋಂಪಿಗಳಿಗೆ ಅದರದೆ ಆದ ಮಹತ್ವ ಮತ್ತು ಕಥೆಯನ್ನು ತಿಳಿಯುವುದು ಅವಶ್ಯವಾಗಿದೆ ಎಂದು ಹೇಳಿದರು. ಅವರ ಕಿರು ಪರಿಚಯವನ್ನು ಸ್ಮಿತಾ ಅಕ್ಷರ್ ಮಾಡಿದರು. ನಂತರ ಅಧ್ಯಕ್ಷರಾದ ಡಾ|| ನವೀನ್ ಕುಮಾರ್ ಗುಬ್ಬಿಯವರು ಮತನಾಡಿ, ಮುಂದಿನ ಕಾರ್ಯಕ್ರಮಗಳ ರೂಪುರಶೆಗಳ ಬಗ್ಗೆ ತಿಳಿಸಿಕೊಟ್ಟರು. ಶೋಭಾ ಪಾಟಿಲ್ ಅವರು ಪರ್ವವಾಚನ ಮತ್ತು ತೀರ್ಥಂಕರರ ಲಾಂಛನ ಸಮೇತ ಹೆಸರುಗಳನ್ನು ಹೇಳಿದರು. ನವೀನ್ ಹೆಚ್ ಆರ್ ಅವರು ಶುಭಾಷಯಗಳನ್ನು ತಿಳಿಸಿದರು. ಶ್ವೇತಾ ನವೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

ದಿನಾಂಕ 25-11-2021ರಂದು ಕುಣಿಗಲ್ ನಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಶಿಲಾಮಯ ಬಸದಿಯ ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಇದ್ದೀಗ ಅಭಿನಂದಾನ ಸುದ್ದಿ.

ದಿನಾಂಕ ನವೆಂಬರ್ 24 ಬುಧವಾರದಂದು ಸ್ವಪ್ನ ಬುಕ್ ಹೌಸ್ ಸಹಯೋಗದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ನಾಡೋಜ ಕಮಲ ಹಂಪನ 87ರ ಸಂಭ್ರಮ ಮತ್ತು ಕಮಲ ಹಂಪನ ಸಾಹಿತ್ಯ ಪುರಸ್ಕಾರ 2021ರ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುವುದರೊಂದಿಗೆ ಶರ್ಮಿಳಾ ಎಂಬ ಪುಸ್ತಕದ ಬಿಡುಗಡೆ ಮಾಡಿ ದಂಪತಿಗಳಿಗೆ ಸನ್ಮಾನಿಸಲಾಯಿತು. ತದನಂತರದಲ್ಲಿ 2021ರ ಹಂಪನ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾದ ಶ್ರೀ ನಿತಿನ್ ಹರಿಪ್ರಿಯ, ವಿಜಯ ಸುಬ್ಬರಾಜ್, ರಾಜ್ ಕುಮಾರ್ ಅಜಿತ್ ಮುರಗಂಡೆ ಹಾಗೂ ಶಾಂತಿನಾಥ ಶಿರಟ್ಟಿ ಇವರುಗಳಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ|| ಟಿ ಸೋಮಶೇಖರ್, ಪ್ರೋಫೆಸರ್ ಬರಗೂರು ರಾಮಚಂದ್ರಪ್ಪ, ಕಮಲ ಹಂಪನ ದಂಪತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತರಿಗೆ ಜ್ವಾಲ ಮಾಲ ನ್ಯೂಸ್ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆದ ಅಖಿಲ ಭಾರತವರ್ಷಿಯ ದಿಗಂಬರ ತೀರ್ಥಕ್ಷೇತ್ರ ಕಮಿಟಿ ನೂತನ ಅಧ್ಯಕ್ಷರಾದ ಶ್ರೀ ಶಿಖರ್ ಚಂದ ಜೀ ಪಹಾಡಿಯ ಇವರಿಗೆ ಸ್ವಾಗತ ಮತ್ತು ಅಭಿನಂದನಾ ಸಮಾರಂಭದ ಸುದ್ದಿ ವಿವರ ಇಲ್ಲಿದೆ.

25-11-2021ರಂದು ಅಖಿಲ ಭಾರತೀಯ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿಯ ನೂತನ ಅಧ್ಯಕ್ಷರಾದ ಶ್ರೀ ಶಿಖರ್ ಚಂದ್ ಜೀ ಪಹಾಡಿಯಾ ಅವರಿಗೆ ಸ್ವಾಗತ ಮತ್ತು ಅಭಿನಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪಹಾಡಿಯಾ ದಂಪತಿಯನ್ನು ಪೂರ್ಣ ಕುಂಭ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮ ಪರಮ ಪೂಜ್ಯ ಮುನಿಶ್ರೀ 108 ಗುಲಾಬಿ ಭೂಷಣ ಮುನಿ ಮಹಾರಾಜರು, ಪರಮ ಪೂಜ್ಯ ಮುನಿಶ್ರೀ 108 ಅಮಿತಂಜನ ಮುನಿ ಮಹಾರಾಜರು, ಪೂಜ್ಯ ಮಾತಾಜೀ  ವೃಂದದವರ ಪಾವನ ಸಾನಿಧ್ಯ. ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದೊಂದಿಗೆ ಚಾವುಂಡರಾಯ ಮಂಟಪದಲ್ಲಿ ನಡೆಯಿತು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ ನವರಿಂದ ದೀಪಪ್ರಜ್ವಲನೆ ಮೂಲಕ ಉದ್ಘಾಟನೆಗೊಂಡ ವೇದಿಕೆಯಲ್ಲಿ ಸಮಾರಂಭದ ಮುಖ್ಯ ಕೇಂದ್ರ ಬಿಂದು ತೀರ್ಥ ಕ್ಷೇತ್ರ ಕಮಿಟಿಯ ಅಧ್ಯಕ್ಷರಾದ ಶ್ರೀ ಶಿಖರ್ ಚಂದ್ ಜೀ ಪಹಾಡಿಯಾ, ಕಮಿಟಿಯ ರಾಷ್ಟ್ರೀಯ ಮಹಾಮಂತ್ರಿಗಳಾದ ಸಂತೋಷ್ ಜೈನ್ ಪೆಂಡಾರಿ, ರಾಷ್ಟ್ರೀಯ ಮಂತ್ರಿ ಶ್ರೀ ಜೈ ಕುಮಾರ್ ಕೋಟಾವಾಲ, ಕರ್ನಾಟಕ ತೀರ್ಥ ಕ್ಷೇತ್ರ ಕಮಿಟಿಯ ಅಧ್ಯಕ್ಷರಾದ ಶ್ರೀ ವಿನೋದ್ ಭಾಕ್ಲಿವಾಲ, ತಮಿಳುನಾಡಿನ ಕ್ಷೇತ್ರಿಯ ಅಧ್ಯಕ್ಷರಾದ ಶ್ರೀ ದಿನೇಶ್ ಜೀ ಸೇಟಿ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ ಪ್ರಸನ್ನಯ್ಯ, ಕರ್ನಾಟಕ ದಿಗಂಬರ ಜೈನ ತೀರ್ಥ ಕ್ಷೇತ್ರ ಕಮಿಟಿಯ ಮಹಾಮಂತ್ರಿ ವಿನೋದ್ ದೊಡ್ಡಣ್ಣನವರ್, ಖಂಡೇವಾಲ್ ಜೈನ ಸಮಾಜದ ಅಧ್ಯಕ್ಷರಾದ ನಿಹಾರ್ ಚೈನ್ಜೀ, ಶ್ರವಣ ಬೆಳಗೊಳದ ಸಮಾಜದ ಅಧ್ಯಕ್ಷರು ಹಾಗೂ ಕರ್ನಾಟಕದ ಅನೇಕ ಊರುಗಳಿಂದ ಆಗಮಿಸಿದ ಜೈನ ಸಮಾಜದ ಅಧ್ಯಕ್ಷರುಗಳು, ಕೆ ಜೆ ಎ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ತೀರ್ಥಂಕರರ ಕ್ಷೇತ್ರ ಕಮಿಟಿ ಹಾಗೂ ಶ್ರೀ ಮಠದ ಪರವಾಗಿ ಶ್ರೀಯುತರಿಗೆ ಸನ್ಮಾನ ಕಾರ್ಯ ನಡೆದುದ್ದಲ್ಲದೇ, ಶ್ರೀಗಳಿಂದ ಪಹಾಡಿಯಾ ಜೀ ಯವರಿಗೆ ಶ್ರಾವಕ ರತ್ನ ಪ್ರಶಸ್ಥಿ ನೀಡಿ ಗೌರವಿಸಲಾಯಿತು.

ಹೊರರಾಜ್ಯದ ಸುದ್ದಿಯಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಆರೋಗ್ಯದ ಶಿಬಿರದಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಆರೋಗ್ಯ ಚಿಕಿತ್ಸಾ ಶಿಬಿರದ ಬಗ್ಗೆ ನಾವು ಹೇಳ ಹೊರಟಿದ್ದೇವೆ.

ಹಾಸನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ದಿ|| ಹಣಿಕಾರ್ ಹೆಚ್ ಪಿ ಬ್ರಹ್ಮಪ್ಪನವರ 104 ನೇ ಜಯಂತಿಯ ಸಂದರ್ಭದಲ್ಲಿ ನವೆಂಬರ್ 11 ನೇ ತಾರೀಖು ಅವರ ಮೊಮ್ಮಕ್ಕಳಾದ ಡಾ|| ಜಿ ಎಂ ಕಾವ್ಯ ಮತ್ತು ಎ.ಬಿ ರಾಜೀವ್ ಅವರು ನಿಶ್ಕುಲಾ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಪ್ರತಿ ವರ್ಷದಂತೆ ಈ ಬಾರಿಯು ಉತ್ತರಾಖಂಡ ಹರಿದ್ವಾರದಲ್ಲಿ ಆಯೋಜಿಸಿದ್ದರು. ಶಿಬಿರದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಅವರ ಆಹಾರ ವಿಹಾರ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಜಾಗೃತಿ ವ್ಯಾಕ್ಯಾನವನ್ನು ಮಾಡಿದರು. ಸುಮಾರು 150 ಮಂದಿ ಗರ್ಭಿಣಿ ಸ್ತ್ರೀಯರಿಗೆ ತಪಾಸಣೆ ನಡೆಸಿ ಔಷಧಿ ವಿತರಣೆ ಮಾಡಲಾಯಿತು. 25 ಮಂದಿ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಲಾಯಿತು. ಶಿಬಿರವನ್ನು ಗಣ್ಯರಾದ ಡಾ|| ಮಂಜುನಾಥ್ ಐ ಪಿ ಎಸ್ ಎಸ್ ಪಿ ಹರಿದ್ವಾರ, ಡಾ|| ಮನಿಶ್ ದತ್ತ್ ರೆಡಿಯೊಲಾಜಿ ಹರಿದ್ವಾರ ಮತ್ತು ಡಾ|| ಧಿರೇಂದ್ರ ಮೆಡಿಕಲ್ ಸೂಪರಿಡೆಂಟ್ ಹರಿದ್ವಾರದವರು ಉದ್ಘಾಟಿಸಿದರು.

ಇಲ್ಲಿಯವರೆಗೆ ವಾರದ ಸುದ್ದಿಗಳನ್ನು ವೀಕ್ಷಿಸಿದ್ದಿರಿ, ಹೀಗೆ ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ತಪ್ಪದೆ ವೀಕ್ಷಿಸಿ ವಾರದ ನಿಮ್ಮ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್