ದಕ್ಷಿಣ ಭಾರತದ ಜೈನ ಧರ್ಮದ ಪರಂಪರೆಯ ಜ್ಯೋತಿಯನ್ನು ಬೆಳಗಿಸಿದ ಕೀರ್ತಿ ಹಾಸನ ಜಿಲ್ಲೆಗೆ ಸೇರುತ್ತದೆ. ಕ್ರಿ.ಪೂ 3ನೇ ಶತಮಾನದಲ್ಲಿ ಆಚಾರ್ಯ ಶ್ರೀ ಭದ್ರಬಾಹು ಬೆಳಗಿದ ಜ್ಯೋತಿಯು ಗಂಗಾ ಮತ್ತು ಹೋಯ್ಸಳ ದೊರೆಗಳ ಕಾಲದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಾ ಜೈನ ಧರ್ಮಕ್ಕೆ ನೆಲೆಯನ್ನು ಒದಗಿಸಿತ್ತು. ಹಾಸನದ ಜಿಲ್ಲೆಯಲ್ಲಿ ಸುಮಾರು 11ರಿಂದ 14 ಶತಮಾನದ ಒಳಗೆ 80 ಬಸದಿಗಳ ನಿರ್ಮಾಣ ವಾಗಿರುವುದಕ್ಕೆ ದಾಖಲೆಗಳಿವೆ. ಆದರೆ ಇಂದು ಕೆಲವೇ ಕೆಲವು ಬಸದಿಗಳು ಮಾತ್ರ ಉಳಿದುಕೊಂಡಿವೆ.ಅವುಗಳಲ್ಲಿ ಈ ದೊಡ್ಡ ಬಸದಿಯು ಒಂದು. ಸಿಂಹಾಸನಪುರಿ ಎಂದು ಉಲ್ಲೇಖಿತವಾಗಿದ್ದ ಹಾಸನವು ಕ್ರಿ.ಸ 1157 ರಲ್ಲಿ ಹೆರಗಿನಲ್ಲಿ ಚನ್ನ ಪಾರ್ಶ್ವನಾಥ ಬಸದಿಯನ್ನು ದೊರೆ ವೀರ ನರಸಿಂಹ ದೇವನ ಪ್ರಧಾನಮಂತ್ರಿಯಾಗಿದ್ದ ಚಾವಿಮ್ಮಯ್ಯ ಪತ್ನಿ ಚಕ್ಕವೇ ನಿರ್ಮಾಣ ಮಾಡಿಸಿದ ನಂತರವೇ ಹಾಸನದಲ್ಲೂ ಸ್ವತಃ ಅವರೇ ನಿರ್ಮಾಣ ಮಾಡಿಸಿದರು ಎಂಬ ಪ್ರತೀತಿ ಇದೆ. ಹಾಸನ ನಗರದ ಮಧ್ಯ ಭಾಗದಲ್ಲಿರುವ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿಯ ಬಸದಿಯು ಬಹಳ ದೊಡ್ಡದಾಗಿದ್ದು ರೂಢಿಯಲ್ಲಿ ದೊಡ್ಡ ಬಸದಿಯೆಂದೇ ಪ್ರಸಿದ್ದಿ. ಇಲ್ಲಿ ಮೂಲ ಬಸದಿಯ ಅವಶೇಷಗಳು ಕಾಲಕಾಲಕ್ಕೆ ಜೀರ್ಣೋದ್ದಾಗೊಂಡು ಬಸದಿಯ ಗರ್ಭಾಂಕಣದ ತಳಪಾಯವನ್ನು ಗಮನಿಸಿದಾಗ ನಕ್ಷತ್ರಾಕಾರದ ಜಗುಲಿಯು ಬಳಪದ ಕಲ್ಲಿನ ಶಿಲೆಯಿಂದ ಮಾಡಲ್ಪಟ್ಟಿದ್ದ ಹೋಯ್ಸಳ ಶೈಲಿಯ ಬಸದಿಯ ನಿದರ್ಶನವಾಗಿದೆ. ಈಗ ಮತ್ತೊಮ್ಮೆ ಮೊದಲಿಗಿಂತಲೂ ಈಗ ವಿನೂತನವಾಗಿ ಸುಂದರವಾಗಿ ಜೀರ್ಣೋದ್ದಾರ ಕಾರ್ಯವನ್ನು ಕೈಗೊಂಡು ಬಹುತೇಕ ಪೂರ್ಣಗೊಂಡಿದ್ದು ಮೇ ತಿಂಗಳಿಗೆ ಪಂಚ ಕಲ್ಯಾಣಕ್ಕಾಗಿ ಸಿದ್ದಗೊಂಡಿದೆ.
ಸುಮಾರು 800 ವರ್ಷಗಳ ಕಾಲ ಪುರಾತನವಾಗಿರುವ ಈ ದೊಡ್ಡ ಬಸದಿಯನ್ನು ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಬಸದಿಯ ನಿರ್ವಹಣೆಯನ್ನು ಹೊತ್ತುಕೊಂಡ ಶ್ರೀ ಹಾಸನ ಜೈನ ಸಂಘವು ಈ ಒಂದು ಕಾರ್ಯಕ್ಕೆ ಮುಂದಾಗಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೂಜ್ಯರಾದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪ್ರೇರಣೆ ಹಾಗೂ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಬಸದಿಯ ಅಭಿವೃದ್ದಿಗಾಗಿ ಒಂದು ಯೋಜನೆಯನ್ನು ಸಿದ್ದಪಡಿಸಿತು. ಅದರಂತೆ ಬಸದಿಯ ಎಡಭಾಗದಲ್ಲಿ ಸಮುದಾಯಕ್ಕೆ ಅನುಕೂಲವಾಗುವಂತೆ ಒಂದು ಜೈನಭವನ ಕಟ್ಟಡ ನಿರ್ಮಾಣ ಹಾಗೂ ದೊಡ್ಡ ಬಸದಿಯ ಜೀರ್ಣೋದ್ಧಾರ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಶ್ರೀಗಳವರ ಆಶಯದಂತೆ ಸುಮಾರು 30 ವರ್ಷಗಳ ಕನಸಾಗಿದ್ದು ಗೋಪುರದ ಒಂದು ಕೊರತೆಯಿದ್ದು ಈ ಕೊರತೆಯನ್ನು ಸಹ ಶ್ರೀ ಹಾಸನ ಜೈನ ಸಂಘದ ಸಹಯೋಗದೊಂದಿಗೆ ಈ ಎಲ್ಲಾ ಅಭಿವೃದ್ದಿ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ಸುಂದರವಾಗಿ ಪೂರ್ಣಗೊಂಡಿವೆ. ಹಾಗೆಯೇ ಬಸದಿಗೆ ಮಾನಸ್ಥಂಭದ ಕೊರತೆಯಾಗಿತ್ತು ಅದನ್ನು ದಾನಿಯೊಬ್ಬರು ಇದರ ಕಾರ್ಯದ ಜವ್ಬಾದಾರಿಯನ್ನು ಹೊತ್ತುಕೊಂಡು ಅದರಂತೆ ಸುಂದರವಾದ ಮಾನಸ್ಥಂಭವೂ ಸಹ ನಿರ್ಮಾಣಗೊಂಡಿದೆ.
ಅದರಂತೆ ಸ್ವಾಮೀಜಿಯವರ ಇಚ್ಚೆಯಂತೆ ನಾವು ಸಾಮಾಜಿಕ ವಾಗಿ ಅಲ್ಲದೇ ಧಾರ್ಮಿಕವಾಗಿಯೂ ಸಹ ಮುಂದುವರೆಯಬೇಕು ಹಾಗೂ ಈಗಿನ ಮಕ್ಕಳಲ್ಲಿ ನಮ್ಮ ಧರ್ಮ ಸಂಸ್ಕಾರವನ್ನು ತಿಳಿಸಿಕೊಡಬೇಕು ಎನ್ನುವ ಅವರ ಆಸೆಯಂತೆ ಸುಮಾರು 12 ಲಕ್ಷದ ವೆಚ್ಚದಲ್ಲಿ ಗರ್ಭಗುಡಿಯ ಹಿಂಭಾಗದಲ್ಲಿ ಧಾರ್ಮಿಕ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಹಾಸನ ದೊಡ್ಡ ಬಸದಿಯನ್ನು ಹೊರಗಿನಿಂದ ವೀಕ್ಷಿಸಿದಾಗ ವಾಸ್ತು ವಿನ್ಯಾಸದ ಅಲಂಕಾರವೆಂಬಂತೆ ದ್ವಾರಮಂಟಪವಿದ್ದು ಬಹುಷಃ ರಕ್ಷಣೆ ಹಿತದೃಷ್ಟಿಯಿಂದ ಸುತ್ತ ಪ್ರಾಕಾರವೊಂದನ್ನು ರಚಿಸಿ ಎಂಟು ಕಂಬಗಳನ್ನು ಆಧಾರಿಸಿದ ಧ್ವಾರಮಂಟಪವನ್ನು ನಿರ್ಮಿಸಲಾಗಿದೆ. ನಂತರ ಬಸದಿಯ ಎಡಭಾಗದಿಂದ ದಕ್ಷಿಣ ಪಥದಲ್ಲಿ ಸಾಗಿದರೆ ಪೂರ್ವ ದಿಕ್ಕಿಗೆ ಮೊದಲಿಗೆ ಕಾಣ ಸಿಗುವುದು ಸುಮಾರು 50 ವರ್ಷಗಳ ಹಿಂದೆ ಅಂದರೆ 1963ರಲ್ಲಿ ಹಾಸನದ ಶ್ವಾವಕಿಯಾದ
ಪುಟ್ಟತಾಯಮ್ಮನವರು ಜೈಪುರದಿಂದ ತಂದು ಸ್ಥಾಪಿಸಿದ 8 ಅಡಿ ಎತ್ತರದ ನಗುಮೊಗದ ಬಾಹುಬಲಿ. ಅಲ್ಲಿಂದ ಮುಂದೆ ಸಾಗಿದರೆ ಬಸದಿಯ ಆಗ್ನೇಯ ಭಾಗದಲ್ಲಿ ಅಪರೂಪದ ಕ್ಷೇತ್ರಪಾಲ ಮೂರ್ತಿ ಜೆಟ್ಟಿಂಗಯ್ಯ ಈ ಯಕ್ಷ ದೇವನಿಗೆ ವಿಶೇಷವಾಗಿ ತೈಲ ಮತ್ತು ಚಂದನದಿಂದ ಅಲಂಕಾರ ಮಾಡಲಾಗುತ್ತಿದೆ. ಕ್ಷೇತ್ರ ಪಾಲ ಗುಡಿಯ ಹಿಂಭಾಗದಲ್ಲಿ ಸುಮಾರು ವರ್ಷ ಪುರಾತನವಾದ ಸರ್ವ ಕಾಲದಲ್ಲೂ ಬಾಡದಿರುವ ಲಕ್ಕಿಯ ಮರವೊಂದಿದೆ. ಲಕ್ಕಿ ಮರದ ಕೆಳಗೆ ನಾಗರದ ಕಲ್ಲುಗಳನ್ನು ಸ್ಥಾಪಿಸಲಾಗಿದೆ.
ಬಸದಿಯ ಧ್ವಾರ ಸುಂದರ ಕೆತ್ತನೆಯಿಂದ ಕೂಡಿದ್ದು ಅದನ್ನು ದಾಟಿ ಒಳ ಪ್ರವೇಶಿಸಿದಾಗ ಮುಖ ಮಂಟಪದ ಒಳಭಾಗದಲ್ಲಿ ನವರಂಗಕ್ಕೆ ಹೊಂದಿಕೊಂಡಂತೆ ಪ್ರತಿಯೊಂದು ಸ್ಥಂಭವೂ ಒಂದೊಂದು ಶೈಲಿಯನ್ನು ಹೊಂದಿದೆ. ಸುಂದರವಾದ ಕೆತ್ತನೆಯನ್ನ ಒಳಗೊಂಡಿದೆ. ಬಸದಿಯ ಒಳಾಂಗಣದಲ್ಲಿ ಭಗವಾನ್ ನ್ಯೇಮಿನಾಥ ತೀರ್ಥಂಕರರ ವಿಗ್ರಹವನ್ನು ಕಾಣಬಹುದಾಗಿದೆ. ಮೂರ್ತಿಯ ತಳಭಾಗದಲ್ಲಿ ಅಪ್ರಕಟಿತ ಶಾಸನ ಉಲ್ಲೇಖಿತದಿಂದ ತಿಳಿಯಬಹುದಾಗಿದೆ. ಉಲ್ಲೇಖವು ಅಸ್ಪಷ್ಠವಾಗಿ ಕಾಣುತ್ತಿರುವುದರಿಂದ ಸರಿಯಾಗಿ ತಿಳಿಯಲು ಅಸಾಧ್ಯವಾಗಿದೆ. ಇದು ಈ ಬಸದಿಯ ಮೂಲ ಮೂರ್ತಿಯಾಗಿರದೆ ಅವಸಾನ ಕಂಡ ಮತ್ತೊಂದು ಬಸದಿಯಲ್ಲಿದ್ದ ಈ ಮೂರ್ತಿಯನ್ನು ತಂದು ಸಂರಕ್ಷಿಸಲಾಗಿದೆ. ಇಲ್ಲಿ ಒಂದು 24 ತೀರ್ಥಂಕರರ ಚತುರ್ಮುಖ ಬಿಂಬವಿದೆ. ಮಧ್ಯದಲ್ಲಿ ನ ಮುಖದ ಕೆಳಗೆ ಯದುಯಕ್ಷೀಯರೊಂದಿಗೆ ಕಾಯೋ ಸರ್ಗ ಭಂಗಿಯಲ್ಲಿರುವ ಸುಮಾರು 5 ಅಡಿ ಎತ್ತರದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂರ್ತಿ ಗಮನ ಸೆಳೆಯುತ್ತಿದೆ. ಮಧ್ಯಕಾಲದ ಹೋಯ್ಸಳರ ಜಿನಬಿಂಬಗಳಲ್ಲಿ ತೀರ್ಥಂಕರರ ದೇಹವನ್ನು ನೀಳವಾಗಿ ಬಿಡಿಸಿದ್ದು ಪ್ರಮಾಣಬದ್ದವಾಗಿರುತ್ತದೆ. ಕಪ್ಪು ಬಳಪದ ಕಲ್ಲನ್ನು ಬಳಸಿ ವಿಶೇಷವಾದ ಮೆರುಗಿನೊಂದಿಗೆ ಜಿನಬಿಂಬದಲ್ಲಿ ದುಂಡಾದ ಮುಖ ಉದ್ದವಾದ ಕಿವಿಗಳು, ತೀಡಿದ ಹುಬ್ಬು ಧ್ಯಾನಾವಸ್ಥೆಯಲ್ಲಿರುವಂತೆ ಅರೆಮುಚ್ಚಿದ ಕಣ್ಣುಗಳು ಸಣ್ಣದಾದ ಕೊರಳು ದೀರ್ಘ ಬಾಹುಗಳನ್ನು ಬಿಡಿಸಲಾಗಿದೆ. ಶಿರದಲ್ಲಿ ಸೂಲಿ ಕೂದಲಿದ್ದು ಜಿನಬಿಂಬದ ತಳಭಾಗದಿಂದ ಮೇಲ್ಭಾಗದವರೆಗೆ ಸೂಲಿ ಸುತ್ತಿರುವ ಸಪ್ತ ಪ್ರಣಾವಳಿಗಳನ್ನು ಹೊಂದಿರುವ ಈ ಮೂರ್ತಿ ಮಂದಸ್ಮಿತ ವದನವು ಗಂಭೀರ ವದನವು ಆಗಿದ್ದು ಧ್ಯಾನ ಮಗ್ನಸ್ಥಿತಿಯಲ್ಲಿ ಭಕ್ತರನ್ನು ಪೂಜ್ಯ ಭಾವನೆಯನ್ನುಂಟುಮಾಡಲಿದೆ.
ಇಂತಹ ಸುಂದರ ಜಿನಾಲಯಕ್ಕೆ ಮೇಲೆ ಶಿಖರ್ಜಿಯ ಗೋಪುರ ಮಾದರಿಯಲ್ಲಿ ಕಳಸ ಗೋಪುರವನ್ನು ನಿರ್ಮಿಸಿರುವುದು ಮೆರುಗನ್ನು ತಂದಿದೆ. ಬಸದಿಯ ಪಕ್ಕದಲ್ಲಿ ನೂತನ ಜೈನ ಭವನ ನಿರ್ಮಿಸಲಾಗಿದೆ,. ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಸ್ವಸ್ಥಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಇಲ್ಲಿಯವರೆವಿಗೂ ಮಹೋನ್ನತ ಧಾರ್ಮಿಕ ಆಚರಣೆಗೆ ಹೆಸರಾದ ಹಾಸನ ನಗರದ ಅತ್ಯಂತ ಹೆಮ್ಮೆಯ ಕಾರ್ಯ ಕೈಗೊಂಡಿರುವ ಶ್ರೀ ಹಾಸನ ಜೈನ ಸಂಘದ
ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಉಪಸ್ತಿತರಿದ್ದು ನಡೆಯಲಿರುವ ಜೀರ್ಣೋದ್ದಾರ ಕಾರ್ಯ ಪಂಚ ಕಲ್ಯಾಣೋತ್ಸವದ ಬಗ್ಗೆ ಮಾತನಾಡಿದರು. ತಮ್ಮ ತನು ಮನ ಧನದ ಮೂಲಕ ಜಿನಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳಿ. ಸಂಪರ್ಕಿಸಬೇಕಾದ ಸಂಖ್ಯೆ : ಎಮ್ . ಅಜಿತ್ ಕುಮಾರ್ ಅಧ್ಯಕ್ಷರು- 9980776273 , ಕೆ, ಜಿ. ಬ್ರಹ್ಮೇಶ್ ಕಾರ್ಯಕರ್ಶಿ – 9448005384 ಹಾಗೂ ಶ್ರೀ ಹಾಸನ ಜೈನ ಸಂಘ.














